ಮೈಸೂರು : ಅರಮನೆಗಳ ವಿಷಯ ಬಂದರೆ ನಮಗೆ ತಟ್ಟನೆ ನೆನಪಿಗೆ ಬರುವುದೇ ಮೈಸೂರಿನ ಅಂಬಾ ವಿಲಾಸ ಅರಮನೆ. ಮೈಸೂರು ನಗರವನ್ನು ಅರಮನೆಗಳ ನಗರ ಎಂದೇ ಕರೆಯಲಾಗುತ್ತದೆ. ಅಂತದೆ ಸಾಲಿನಲ್ಲಿ ಲಲಿತ್ ಮಹಲ್ ಮೈಸೂರಿನ ಅರಮನೆಗಳಲ್ಲಿ ಒಂದಾಗಿದ್ದು, ಮೈಸೂರಿನ ೨ ನೇ ಅತಿದೊಡ್ಡ ಅರಮನೆ ಎಂದು ಜನಪ್ರಿಯವಾಗಿದೆ.
ಹಾಲಿನ ನೊರೆಯಂತೆ ಬೆಳ್ಳಗೆ ಇರುವ ಈ ಕಟ್ಟಡವು ಮೈಸೂರು ನಗರದಿಂದ ಕೇವಲ ೧೧ ಕಿ.ಮೀ ದೂರದಲ್ಲಿದೆ. ಇದನ್ನು ೧೯೨೧ ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ನೇತೃತ್ವದಲ್ಲಿ ನಿರ್ಮಾಣಗೊಂಡಿದ್ದ ಲಲಿತ್ ಮಹಲ್ ದಿನ ಕಳೆದಂತೆ ಶಿತಿಲಾವ್ಯಸ್ಥೆಗೆ ತಲುಪುತ್ತಿದ್ದು, ಸದ್ಯ ಐತಿಹಾಸಿಕ ಹಿನ್ನೆಲೆ ಹೊಂದಿರುವ ಪ್ರತಿಷ್ಠಿತ ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್ ಗೆ ಹಲವು ವರ್ಷಗಳ ಬಳಿಕ ಜೀರ್ಣೋದ್ದಾರ ಭಾಗ್ಯ ಕೂಡಿಬಂದಿದೆ. ಮತ್ತು ಪಾರಂಪರಿಕ ರೀತಿಯಲ್ಲೇ ಹೋಸ ವಿನ್ಯಾಸದ ಮೂಲಕ ಪುನರ್ ಜನ್ಮ ಸಿಕ್ಕಲಿದೆ ಎಂದು ಹೇಳಲಾಗುತ್ತಿದೆ.
ಅಂದಿನ ಆಳರಸರ ಕಾಲದಲ್ಲಿ ಬ್ರಿಟಿಷ್ ವೈಸ್‌ರಾಯ್ ಹಾಗೂ ಅತಿಥಿಗಳು ಉಳಿದುಕೊಳ್ಳಲು ಕಟ್ಟಿದ್ದ ಲಲಿತ್ ಮಹಲ್ ಪ್ಯಾಲೇಸ್ ದಶಕಗಳು ಕಳೆದಂತೆ ಶಿತಿಲಾವಸ್ಥೆಗೆ ತಲುಪುತ್ತಿದೆ. ಈ ಹಿನ್ನಲೆ ರಾಜ್ಯ ಸರ್ಕಾರದ ಜಂಗಲ್ ಲಾಡ್ಡಸ್ ಆ್ಯಂಡ್ ರೆಸಾರ್ಟ್ ಅಧೀನದಲ್ಲಿ ಲಲಿತ ಮಹಲ್ ಪ್ಯಾಲೇಸ್ ಇದ್ದು, ಕಟ್ಟಡವನ್ನು ನವೀಕರಿಸಿ, ನಿರ್ವಹಣೆ ಮಾಡಿ ರಾಜ್ಯ ಸರಕಾರಕ್ಕೆ ಇಂತಿಷ್ಟು ಹಣ ನೀಡಲು ಎಂಟು ತಿಂಗಳ ಹಿಂದೆಯೇ ಜಾಗತಿಕ ಟೆಂಡರ್ ಕರೆಯಲಾಗಿದೆ ಎನ್ನಲಾಗಿದೆ.
ಆದರೆ ಪಾರಂಪರಿಕ ಶೈಲಿಯಲ್ಲಿಯೇ ಜೀರ್ಣೋದ್ದಾರ ಮಾಡಬೇಕಿದ್ದು ಜೀರ್ಣೋದ್ದಾರಕ್ಕೆ ತಜ್ಞರ ಸಲಹೆಯಂತೆ 50 ಕೋಟಿ ರೂ. ಆಗಬಹುದು ಎಂದು ಅಂದಾಜಿಸಲಾಗಿದ್ದು, ಇನ್ನು ಲಲಿತ್ ಮಹಲ್ ದುರಸ್ಥಿಗೆ ಪರಿಣಿತರೇ ಬೇಕಿರುವುದರಿಂದ ಹಾಗೂ ಇನ್ನು ಅನೇಕ ಕಾರಣಗಳಿಂದ ಟೆಂಡರ್ ವಿಳಂಬವಾಗಿದೆ. ಈಗ ಟೆಂಡರ್ ಅರ್ಜಿ ಸಲ್ಲಿಸಲು ಡಿ. 20 ಕೊನೆಯ ದಿನವಾಗಿದ್ದು ಅರ್ಹರು ಟೆಂಡರ್ ಸಲ್ಲಿಸುವಂತೆ ಸೂಚಿನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.



