ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಕಮಿಷನ್ ದಂಧೆಯಲ್ಲಿ ಮುಳುಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಈ ಮತ್ತೆ ಗುಡುಗಿದ್ದಾರೆ. ಪ್ರತಿ ಇಲಾಖೆಯಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ರಾಜ್ಯದಲ್ಲಿ ಶೇ. 63ರಷ್ಟು ಭ್ರಷ್ಟಾಚಾರ ಇದೆ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ವರದಿ ನೀಡಿದ್ದಾರೆ ಎಂದು ಅಶೋಕ್ ಟ್ವೀಟ್ ಮೂಲಕ ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು 40% ಕಮಿಷನ್ ಎಂದು ಬಿಜೆಪಿ ಸರ್ಕಾರದ ಮೇಲೆ ಇಲ್ಲಸಲ್ಲದ ಸುಳ್ಳು ಆರೋಪ, ಅಪಪ್ರಚಾರ ಮಾಡಿ ಕನ್ನಡಿಗರ ದಿಕ್ಕು ತಪ್ಪಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಈಗ ಸಂಪೂರ್ಣವಾಗಿ ಕಮಿಷನ್ ದಂಧೆಯಲ್ಲಿ ಮುಳುಗಿದೆ ಎಂದು ಆರ್ ಅಶೋಕ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದಿದ್ದಾರೆ.
ಈ ಸಂದರ್ಭದಲ್ಲಿ ಸ್ವಾಮಿ ಸಿಎಂ ಸಿದ್ದರಾಮಯ್ಯ ನವರೇ ಹಾಗು ಡಿಸಿಎಂ ಡಿಕೆ ಶಿವಕುಮಾರ್ ಅವರೇ, ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದೆ. ಕರ್ನಾಟಕದಲ್ಲಿ ಶೇ. 63% ಭ್ರಷ್ಟಾಚಾರ ಇದೆ. ಸ್ವತಃ ಮಾನ್ಯ ಉಪಲೋಕಾಯುಕ್ತರೇ ತಮ್ಮ ಘನ ಸರ್ಕಾರಕ್ಕೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಎಂದು ಬರೆದಿದ್ದಾರೆ.
ಮುಂದುವರೆಸುತ್ತಾ ಈಗೇನು ಹೇಳುತ್ತೀರಿ? ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುತ್ತೀರಾ? ಅಥವಾ ಇದೇ ಭಂಡ ಬಾಳು ಮುಂದುವರೆಸುತ್ತೀರಾ? ಸುಳ್ಳು, ಅಪಪ್ರಚಾರ, ಕುತಂತ್ರದಿಂದ 136 ಸೀಟು ಪಡೆದ ಕಾಂಗ್ರೆಸ್ ಪಕ್ಷ, ಈಗ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿದರೆ, 36 ಸೀಟೂ ಬರುವುದಿಲ್ಲ. ಇದು ನನ್ನ ಗ್ಯಾರಂಟಿ ಎಂದು ಆರ್ ಅಶೋಕ್ ಬರೆದಿದ್ದಾರೆ.
ಭತ್ತ ಖರೀದಿ ಕೇಂದ್ರ ತೆರೆಯಿರಿ – ಅಶೋಕ್ :
ಮತ್ತೊಂದೆಡೆ ಭತ್ತ ಖರೀದಿ ಕೇಂದ್ರಗಳನ್ನು ಕೂಡಲೇ ತೆರೆದು ರೈತರು ಮತ್ತೊಮ್ಮೆ ಬೀದಿಗಿಳಿದು ಪ್ರತಿಭಟಸಬೇಕಾದ ಅನಿವಾರ್ಯತೆ ತಪ್ಪಿಸಿ ಎಂದು ಆರ್ ಅಶೋಕ್ ಟ್ವೀಟ್ ಮಾಡಿದ್ದಾರೆ. ಈ ಬಾರಿ ಉತ್ತಮ ಮಳೆಯಿಂದಾಗಿ ಮಂಡ್ಯ, ಮೈಸೂರು ಭಾಗದಲ್ಲಿ ಭತ್ತದ ಬೆಳೆಯಲ್ಲಿ ಉತ್ತಮ ಫಸಲು ಬಂದಿದೆ. ಆದರೆ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸದೆ, ಸೂಕ್ತ ಬೆಲೆ ಕೊಡದೆ, ದಾಸ್ತಾನಿಗೆ ಜಾಗವಿಲ್ಲ, ತೇವಾಂಶ ಜಾಸ್ತಿ ಇದೆ ಎಂದಿದ್ದಾರೆ.
ಕೇಂದ್ರ ಸರ್ಕಾರ ಕ್ವಿಂಟಲ್ ಭತ್ತಕ್ಕೆ ₹2362 ಬೆಂಬಲ ಬೆಲೆ ಘೋಷಿಸಿದ್ದು, ಕೇರಳ, ಒಡಿಸ್ಸಾ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ನೀಡುತ್ತಿರುವಂತೆ ರಾಜ್ಯ ಸರ್ಕಾರದ ವತಿಯಿಂದ ಕ್ವಿಂಟಲ್ ಭತ್ತಕ್ಕೆ ₹500 ಪ್ರೋತ್ಸಾಹ ಧನವಾಗಿ ಬೆಂಬಲ ಬೆಲೆ ಘೋಷಣೆ ಮಾಡಿ ಕೇಂದ್ರಗಳ ಮೂಲಕ ಭತ್ತ ಖರೀದಿ ಮಾಡಿ ರೈತರ ನೆರವಿಗೆ ಬನ್ನಿ ಎಂದು ಟ್ವೀಟ್ನಲ್ಲಿ ಬರೆದಿದ್ದಾರೆ.



