ನವದೆಹಲಿ : ಕಾಂಗ್ರೆಸ್ ಸಂಸದ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದು, ಕೇಂದ್ರವು ವಿರೋಧ ಪಕ್ಷದ ನಾಯಕರು ವಿದೇಶಿ ಗಣ್ಯರನ್ನು ಭೇಟಿಯಾಗುವುದನ್ನು ವ್ಯವಸ್ಥಿತವಾಗಿ ದೂರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಹಿಂದಿನ ಆಡಳಿತಗಳು ಈ ಪದ್ಧತಿಯನ್ನು ಗೌರವಿಸುತ್ತಿದ್ದವು. ಆದರೆ ಈಗ ಅದನ್ನು ಕೈಬಿಡಲಾಗಿದೆ ಎಂದು ಹೇಳಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನವದೆಹಲಿಗೆ ಆಗಮಿಸುವ ಮುನ್ನ ಮಾತನಾಡಿದ ರಾಹುಲ್ ಗಾಂಧಿ, ವಿದೇಶಿ ನಿಯೋಗಗಳೊಂದಿಗೆ ವಿರೋಧ ಪಕ್ಷದ ಸಭೆಗಳು ದೀರ್ಘಕಾಲದ ಸಂಸದೀಯ ರೂಢಿಯಾಗಿದೆ. ಮಾಜಿ ಪ್ರಧಾನಿಗಳಾದ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಸರ್ಕಾರಗಳ ಅವಧಿಯಲ್ಲಿ ಇದು ನಡೆಯುತ್ತಿತ್ತು. ಇದು ಒಂದು ಸಂಪ್ರದಾಯ ಆದರೆ ಇತ್ತೀಚಿನ ದಿನಗಳಲ್ಲಿ, ವಿದೇಶಿ ಗಣ್ಯರು ಭೇಟಿ ನೀಡಿದಾಗ ಅಥವಾ ನಾನು ವಿದೇಶ ಪ್ರವಾಸ ಮಾಡುವಾಗ, ಸರ್ಕಾರವು ಅವರಿಗೆ ಎಲ್‌ಒಪಿಯನ್ನು ಭೇಟಿ ಮಾಡದಂತೆ ಸಲಹೆ ನೀಡುತ್ತದೆ. ನಾವು ಕೂಡ ಭಾರತವನ್ನು ಪ್ರತಿನಿಧಿಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಈ ವೇಳೆ ಪ್ರಧಾನಿ ಸಚಿವಾಲಯ ಮತ್ತು ವಿದೇಶಾಂಗ ಸಚಿವಾಲಯ ವಿದೇಶದ ನಿಯೋಗಗಳನ್ನು ವಿಪಕ್ಷಗಳಿಂದ ದೂರವಿಡುತ್ತಿದೆ. ಭಾರತದ ನಿಲುವಿನ ಬಗ್ಗೆ ಎಲ್‌ಒಪಿ ವಿಭಿನ್ನ ದೃಷ್ಟಿಕೋನವನ್ನು ನೀಡುವುದನ್ನು ಸರ್ಕಾರ ಬಯಸುವುದಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಪುಟಿನ್ ದೆಹಲಿಗೆ ಬಂದಿಳಿಯಲಿರುವ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರ ಈ ಆರೋಪ ಹೊರಬಿದ್ದಿದ್ದು. ಕಳೆದ ವರ್ಷ ಮಾಸ್ಕೋದಲ್ಲಿ ಪುಟಿನ್, ಪ್ರಧಾನಿ ಮೋದಿ ಅವರಿಗೆ ಆತಿಥ್ಯ ನೀಡಿದ್ದರು. ಇದೀಗ ಪುಟಿನ್ ದೆಹಲಿಗೆ ಬಂದಿಳಿದ ಕೂಡಲೇ ಮೋದಿ ಅವರಿಗೆ ಖಾಸಗಿ ಭೋಜನ ಕೂಟವನ್ನು ಆಯೋಜಿಸಲಿದ್ದಾರೆ ಎಂದಿದ್ದಾರೆ.
ಶುಕ್ರವಾರ ನಡೆಯಲಿರುವ ಅವರ ಔಪಚಾರಿಕ ಮಾತುಕತೆಗಳು ರಕ್ಷಣಾ ಸಹಕಾರವನ್ನು ವಿಸ್ತರಿಸುವುದು, ಭಾರತ-ರಷ್ಯಾ ವ್ಯಾಪಾರವನ್ನು ಬಾಹ್ಯ ಒತ್ತಡದಿಂದ ರಕ್ಷಿಸುವುದು ಮತ್ತು ಸಣ್ಣ ಮಾಡ್ಯುಲರ್ ಪರಮಾಣು ರಿಯಾಕ್ಟರ್‌ಗಳಲ್ಲಿನ ಸಹಯೋಗದ ಮೇಲೆ ಕೇಂದ್ರೀಕರಿಸುತ್ತದೆ ಎಂದು ತಿಳಿಸಿದ್ದಾರೆ.
ಈ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ರಷ್ಯಾ ಮತ್ತು ಭಾರತದ ಸಂಬಂಧಗಳು ಬಹಳ ಹಿಂದಿನದ್ದು. ನಿಖರವಾಗಿ 70 ವರ್ಷಗಳ ಹಿಂದೆ ಯುಎಸ್ಎಸ್ಆರ್‌ನ ಎರಡು ಅಗ್ರ ನಾಯಕರು ಭಾರತಕ್ಕೆ ಬಂದರು. ನಿಕೊಲಾಯ್ ಬುಲ್ಗಾನಿನ್ ಮತ್ತು ನಿಕಿತಾ ಕ್ರುಶ್ಚೇವ್ 1955 ರ ನವೆಂಬರ್ 18ರಿಂದ 30ರವರೆಗೆ ಮತ್ತು ಮತ್ತೆ 1955ರ ಡಿಸೆಂಬರ್ 7ರಿಂದ 14ರವರೆಗೆ 19 ದಿನಗಳ ಕಾಲ ಇಲ್ಲಿದ್ದರು. ಇದು ಆರು ತಿಂಗಳ ಹಿಂದೆ ಜವಾಹರಲಾಲ್ ನೆಹರೂ ಯುಎಸ್ಎಸ್ಆರ್‌ಗೆ ಪ್ರಯಾಣ ಬೆಳೆಸಿದ್ದರ ನಂತರ ನಡೆಯಿತು ಎಂದು ಹೇಳಿದರು.
ಇನ್ನೂ ರಮೇಶ್ 1955ರಲ್ಲಿ ಸೋವಿಯತ್ ನಾಯಕರ ಭಾರತ ಭೇಟಿಯ ವಿಡಿಯೊ ತುಣುಕುಗಳನ್ನು ಸಹ ಹಂಚಿಕೊಂಡಿದ್ದಾರೆ. ಕೆಲವು ವರ್ಷಗಳ ನಂತರ, ತಂತ್ರಜ್ಞಾನ ಹಸ್ತಾಂತರದೊಂದಿಗೆ ಎಚ್‌ಎಎಲ್‌ನಲ್ಲಿ ಮಿಗ್ ವಿಮಾನಗಳನ್ನು ತಯಾರಿಸಲಾಗ ತೊಡಗಿತು. ಈ ಭೇಟಿಯು ಓಎನ್‌ಜಿಸಿ ಮತ್ತು ಐಡಿಪಿಎಲ್‌ನಂತಹ ಅನೇಕ ಸಾರ್ವಜನಿಕ ಕ್ಷೇತ್ರ ಸಂಸ್ಥೆಗಳ ಭವಿಷ್ಯ ರೂಪಿಸುವುದಕ್ಕೂ ಸಹಾಯ ಮಾಡಿತು. ಅವುಗಳ ಮೂಲಕ ಅನೇಕ ಖಾಸಗಿ ಉದ್ಯಮಗಳು ಹುಟ್ಟಿ ಬೆಳೆದವು ಎಂದು ಅವರು ತಿಳಿಸಿದ್ದಾರೆ.



