ಬೆಂಗಳೂರು: ಉದ್ಯೋಗಸ್ಥ ಮಹಿಳೆಯರಿಗೆ ಮುಟ್ಟಿನ ರಜೆಯನ್ನು ಕಡ್ಡಾಯಗೊಳಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸರ್ಕಾರವು ಮಹಿಳೆಯರನ್ನು ಬೆಂಬಲಿಸುವ ಮತ್ತು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ. ನಾವು ಸಮಾನತೆಗೆ ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಸರ್ಕಾರದ ನೀತಿ. ನಾವು ಸಮಾನತೆಯನ್ನು ಪಾಲಿಸಬೇಕು. ಪುರುಷರು ಮತ್ತು ಮಹಿಳೆಯರ ನಡುವೆ ನಾವು ಯಾವುದೇ ತಾರತಮ್ಯ ಮಾಡಬಾರದು ಎಂದು ನಾನು ಭಾವಿಸುತ್ತೇನೆ. ನಾವು ಇಬ್ಬರನ್ನೂ ಸಮಾಜದಲ್ಲಿ ಒಟ್ಟಿಗೆ ಕರೆದೊಯ್ಯಬೇಕು ಮತ್ತು ಪ್ರಗತಿ ಸಾಧಿಸಬೇಕು. ಇಬ್ಬರೂ ಸಮಾಜದ ಭಾಗ ಎಂದು ಹೇಳಿದ್ದಾರೆ.
ಈ ಕುರಿತು ವಿವಿಧ ವಲಯಗಳ 18 ರಿಂದ 52 ವರ್ಷ ವಯಸ್ಸಿನ ಉದ್ಯೋಗಸ್ಥ ಮಹಿಳೆಯರಿಗೆ ತಿಂಗಳಿಗೆ ಒಂದರಂತೆ ವರ್ಷಕ್ಕೆ 12 ಮುಟ್ಟಿನ ರಜೆಯನ್ನು ವೇತನ ಸಹಿತ ಕಡ್ಡಾಯಗೊಳಿಸಿ ಸರ್ಕಾರ ಕಳೆದ ತಿಂಗಳು ಆದೇಶ ಹೊರಡಿಸಿತ್ತು. ಆದರೆ ಇದೀಗ ಇದಕ್ಕೆ ವಿರೋಧ ವ್ಯಕ್ತವಾಗುತ್ತಿರುವ ಹಿನ್ನಲೆ ಡಿಕೆ ಶಿವಕುಮಾರ್ ಈ ಹೇಳಿಕೆ ನೀಡಿದ್ದಾರೆ.
ಮಹಿಳೆಯರ ಸಾಮರ್ಥ್ಯಗಳನ್ನು ಶ್ಲಾಘಿಸಿದ ಶಿವಕುಮಾರ್, ವಿವಿಧ ಕಾರ್ಯಕ್ರಮಗಳ ಮೂಲಕ ಅವರನ್ನು ಸಬಲೀಕರಣಗೊಳಿಸಲು ಸರ್ಕಾರ ಮಾಡುತ್ತಿರುವ ಪ್ರಯತ್ನಗಳನ್ನು ಎತ್ತಿ ತೋರಿಸಿದ್ದು, ಈ ಬಗ್ಗೆ ಮಹಿಳಾ ಸಂಘಗಳನ್ನು ಪ್ರೋತ್ಸಾಹಿಸಿರುವುದು ಮತ್ತು ಸರಿಯಾದ ನಿರ್ದೇಶನ ಮತ್ತು ಬೆಂಬಲದೊಂದಿಗೆ ಮಹಿಳೆಯರು ಉತ್ತಮ ಸಾಧನೆ ಮಾಡಲು ಸಮರ್ಥರಾಗಿದ್ದಾರೆ ಎಂದು ಒತ್ತಿ ಹೇಳಿದ್ದಾರೆ. ಎಲ್ಲ ಮಹಿಳೆಯರು ಎಲ್ಲ ವಿಚಾರಗಳನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ನಾವು ಮಹಿಳೆಯರಿಗೆ ಸಾಕಷ್ಟು ಶಕ್ತಿಯನ್ನು ನೀಡಿದ್ದೇವೆ, ಬಹಳಷ್ಟು ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಮಹಿಳೆಯರು ಸಮರ್ಥರು, ಅದಕ್ಕಾಗಿಯೇ ಅವರು ಸಂಘವನ್ನು ರಚಿಸಲು ಬಯಸಿದ್ದರು. ನಾವು ಅವರನ್ನು ಪ್ರೋತ್ಸಾಹಿಸುತ್ತಿದ್ದೇವೆ. ನೀವು ಅವರಿಗೆ ಬಲ ನೀಡಿದರೆ ಮಹಿಳೆಯರು ಹೆಚ್ಚು ಸಮರ್ಥರು, ಆದರೆ ಅವರಿಗೆ ನಿರ್ದೇಶನ ಬೇಕು, ಅಷ್ಟೆ ಎಂದು ತಿಳಿಸಿದ್ದಾರೆ.
ಬಳಿಕ 2025ರ ನವೆಂಬರ್ 12ರಂದು, ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ, ತೋಟ ಕಾರ್ಮಿಕರ ಕಾಯ್ದೆ, ಬೀಡಿ ಮತ್ತು ಸಿಗಾರ್ ಕಾರ್ಮಿಕರ ಕಾಯ್ದೆ, ಮೋಟಾರು ಸಾರಿಗೆ ಕಾಯ್ದೆ ಅಡಿಯಲ್ಲಿ ನೋಂದಣಿ ಆಗಿರುವ ಕೈಗಾರಿಕೆಗಳು ಮತ್ತು ಸಂಸ್ಥೆಗಳೂ ಸೇರಿದಂತೆ ಎಲ್ಲ ವಲಯಗಳಲ್ಲಿ ಕೆಲಸ ಮಾಡುತ್ತಿರುವ 18 ರಿಂದ 52 ವರ್ಷದ ಎಲ್ಲ ಖಾಯಂ, ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ತಿಂಗಳಿಗೆ ಒಂದು ದಿನದಂತೆ ವರ್ಷಕ್ಕೆ 12 ಮುಟ್ಟಿನ ರಜೆಯನ್ನು ನೀಡುವಂತೆ ಎಲ್ಲ ಉದ್ಯೋಗದಾತರಿಗೂ ಸೂಚಿಸಲಾಗಿದೆ.
ಈ ರಜೆ ಪಡೆಯಲು ಯಾವುದೇ ವೈದ್ಯಕೀಯ ಪ್ರಮಾಣಪತ್ರದ ಅಗತ್ಯವಿಲ್ಲ ಮತ್ತು ಅದನ್ನು ಇತರ ರಜೆಗಳೊಂದಿಗೆ ಸೇರಿಸಬಾರದು ಎಂದು ತಿಳಿಸಿದ್ದಾರೆ.
ಈ ಬೆನ್ನಲ್ಲೇ ವಿವಿಧ ವಲಯಗಳ ಉದ್ಯೋಗಸ್ಥ ಮಹಿಳೆಯರಿಗೆ ತಿಂಗಳಿಗೆ ಒಂದರಂತೆ ವರ್ಷಕ್ಕೆ 12 ಮುಟ್ಟಿನ ರಜೆಯನ್ನು ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ಇತ್ತೀಚಿನ ನಿರ್ದೇಶನವನ್ನು ಪ್ರಶ್ನಿಸಿ ಬೆಂಗಳೂರು ಹೋಟೆಲ್‌ಗಳ ಸಂಘ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಹಾಗೂ ಸರ್ಕಾರವು ತನ್ನ ಮಹಿಳಾ ಉದ್ಯೋಗಿಗಳಿಗೆ ಈ ನೀತಿಯನ್ನು ನೀಡಿಲ್ಲ. ಹೀಗಾಗಿ, ಇದು ತಾರತಮ್ಯದಿಂದ ಕೂಡಿದೆ ಎಂದು ಹೇಳಿದ್ದು, ಇದಾದ ನಂತರ, ರಾಜ್ಯ ಸರ್ಕಾರವು ತನ್ನ ಉದ್ಯೋಗಿಗಳಿಗೂ ಮುಟ್ಟಿನ ರಜೆಯನ್ನು ವಿಸ್ತರಿಸಿದೆ ಎನ್ನಲಾಗಿದೆ.



