ವರದಿ :ಸ್ಟೀಫನ್ ಜೇಮ್ಸ್.
ಸೋಮಾರಿತನ ತೋರ್ಪಡಿಸಿದ ಸಿಸಿಎಫ್…!?
ಬೆಳಗಾವಿ:ರಾಜ್ಯದ 13ಅರಣ್ಯ ವೃತ್ತಗಳ ಪೈಕಿ ಬೆಳಗಾವಿ ಅರಣ್ಯ ವೃತ್ತ ಮಾತ್ರ ತನ್ನ ಸಿಬ್ಬಂಧಿಗಳ ಸೇವಾಜೇಷ್ಠತೆ ಮತ್ತು ಮುಂಬಡ್ತಿ ಬೇಡಿಕೆ ಈಡೇರಿಸುವಲ್ಲಿ ಹಲವು ವರ್ಷಗಳಿಂದ ವಿಫಲವಾಗುತ್ತ ಬಂದಿದ್ದು, ಬೆಳಗಾವಿ ಅಧಿವೇಶನದ ಹೊಸ್ತಿಲಲ್ಲಿ ನೌಕರರು ಹಿರಿಯ ಅಧಿಕಾರಿಗಳ ವಿರುದ್ಧ ವ್ಯಗ್ರರಾಗಿದ್ದಾರೆ.

ಬೆಳಗಾವಿ ಅರಣ್ಯ ವೃತ್ತದ ಗಸ್ತು ಅರಣ್ಯ ಪಾಲಕರು ಹಾಗೂ ಅರಣ್ಯ ವೀಕ್ಷಕರ ಸಂಘ ಉಪಾಯ ಕಾಣದೇ ಈಗ ಸರಕಾರದ ಗಮನ ಸೆಳೆಯಲು ಪ್ರತಿಭಟನೆಯ ಹಾದಿಗೆ ಮುಂದಾಗಿದೆ.
ರಾಜ್ಯದ ಪ್ರಮುಖ ಅರಣ್ಯ ವೃತ್ತಗಳ ಪೈಕಿ ಬೆಳಗಾವಿಯೂ ಒಂದಾಗಿದ್ದು, ನಿತ್ಯಹರಿಧ್ವರ್ಣ ಕಾಡಿನಿಂದ ಕೂಡಿದ ಸಮೃದ್ಧ ಅರಣ್ಯ ಪ್ರದೇಶವಾಗಿದೆ. ಇಲ್ಲಿ ಅರಣ್ಯ ಸಂರಕ್ಷಣೆ ಅತಿ ಆದ್ಯತೆಯ ಕೆಲಸವಾಗಿದ್ದು, ಚಟುವಟಿಕೆಯಿಂದ ಇರುವ ನೌಕರರಿಗೆ ಪೂರಕ ಸೇವಾ ಅರಣ್ಯ ವೃತ್ತ ಎನ್ನಬಹುದು. ಕಳೆದ ಹಲವು ವರ್ಷಗಳಿಂದ ತಮಗೆ ಸಿಗಬೇಕಾದ ನ್ಯಾಯಯುತ ಪದೋನ್ನತಿಗಾಗಿ 480ಕ್ಕೂ ಹೆಚ್ಚು ನೌಕರರು ಎಡೆಬಿಡದ ಹೋರಾಟ ಮತ್ತು ಮನವಿ ಸಲ್ಲಿಸುತ್ತ ಬಂದರೂ ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚೌಹಾನ್ ಮಾತ್ರ ಗಮನ ಹರಿಸಿಲ್ಲ ಎಂದು ಆರೋಪಿಸಲಾಗಿದೆ. ಬೆಳಗಾವಿ ವೃತ್ತದ ಅರಣ್ಯ ನೌಕರರ ಹೋರಾಟಕ್ಕೆ 20ಕ್ಕೂ ಹೆಚ್ಚು ಶಾಸಕರು ಹಾಗೂ ರಾಜ್ಯ ಸರಕಾರಿ ನೌಕರರ ಸಂಘ ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮೀಸಲಾತಿ ಹಾಗೂ ಮೀಸಲಾತಿ ರಹಿತ ವರ್ಗದ ಎಲ್ಲ ನೌಕರರಿಗೆ ಸಿಗಬೇಕಾದ ಸೇವಾಜೇಷ್ಠತೆ ಹಾಗೂ ಪದೋನ್ನತಿ ಕೊಡಿಸಲು ಕಾನೂನು ಬದ್ಧವಾಗಿ ಪರಿಹಾರ ಕಂಡುಕೊಳ್ಳಲು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಫಲರಾಗಿದ್ದು, ಈ ಬಗ್ಗೆ ಗಮನ ಹರಿಸಿಲ್ಲ ಎಂದು ಸಿಬ್ಬಂಧಿ ಆರೋಪಿಸಿ ಅಸಮಧಾನ ಹೊರಹಾಕಿದ್ದಾರೆ.
ಸುದೀರ್ಘಾವಧಿ ಬೀಡುಬಿಟ್ಟ ಸಿಸಿಎಫ್, ಸಾಧನೆ ಶೂನ್ಯ:
ಸುಮಾರು ನಾಲ್ಕು ವರ್ಷಗಳಿಂದ ಬೆಳಗಾವಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಬೀಡು ಬಿಟ್ಟಿರುವ ಮಂಜುನಾಥ ಚೌಹಾನ್ ಬೆಳಗಾವಿ ಅರಣ್ಯ ವೃತ್ತದ ಸುಧಾರಣೆಗೆ ಕೈಗೊಂಡ ಕ್ರಮಗಳು ಶೂನ್ಯ, ಸಾರ್ವಜನಿಕ ಸಂಪರ್ಕವಿಲ್ಲದೇ, ಇಲಾಖೆಯ ಚಟುವಟಿಕೆಗಳ ಮೇಲುಸ್ತುವಾರಿ ನಡೆಸದೇ ಸುಮ್ಮನೇ ಕಾಲ ಕಳೆಯುತ್ತಿದ್ದಾರೆ, ಒಂದು ಬಾರಿಯೂ ನೌಕರರ ಕುಂದು ಕೊರತೆ ಸಭೆ ನಡೆಸಿಲ್ಲ, ನೌಕರರ ನಿರಂತರ ಮನವಿ ಪತ್ರಗಳು ಹಾಗೂ ನ್ಯಾಯಯುತವಾದ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ, 110 ಹುದ್ದೆಗಳು ಖಾಲಿ ಇದ್ದರೂ ಮುಂಬಡ್ತಿ ಕೊಡುತ್ತಿಲ್ಲ, ಖಾಲಿ ಹುದ್ದೆಗಳಿಗೆ ಮುಂಬಡ್ತಿ ಕೊಡುವಂತೆ ನಡೆದ ಪ್ರತಿಭಟನೆ ಹಾಗೂ ಹೋರಾಟಗಳಿಗೆ ಮನ್ನಣೆ ನೀಡಿಲ್ಲ ಎಂದು ಸಿಸಿಎಫ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಸಂಧಾನಸಭೆ ವಿಫಲ: ಜೇಷ್ಠತಾ ಪಟ್ಟಿ ಪ್ರಕಟ ಹಾಗೂ ಪದೋನ್ನತಿ ನೀಡಬೇಕ ಎಂಬ ಬೇಡಿಕೆ ಸಂಬಂಧ ಸಂಧಾನ ನಡೆಸಲು ಬೆಂಗಳೂರಿನಲ್ಲಿ ಡಿ. 1ರಂದು ನಡೆದ ಹಿರಿಯ ಅಧಿಕಾರಿಗಳೊಂದಿಗಿನ ಸಭೆ ವಿಫಲವಾಗಿದೆ. ಅರಣ್ಯ ಇಲಾಖೆಯ ಸಿಬ್ಬಂಧಿ ಮತ್ತು ನೇಮಕಾತಿ ವಿಭಾಗದ ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಾಶ್ವತಿ ಮಿಶ್ರಾ ಬೆಳಗಾವಿ ವೃತ್ತದ ಅರಣ್ಯ ಸಿಬ್ಬಂಧಿಯೊಂದಿಗೆ ನಡೆಸಿದ ಸಭೆ ವಿಫಲಗೊಂಡಿದೆ. ನೆನೆಗುದಿಗೆ ಬಿದ್ದಿರುವ ಬೇಡಿಕೆಯಾದ ಬೆಳಗಾವಿ ವೃತ್ತದ ಎಲ್ಲ ಸಿಬ್ಬಂಧಿಗೆ ಪದೋನ್ನತಿ ಪ್ರಕಟಿಸದೇ ಬೇರೆ ಮಾತು ಬೇಡವೆ ಬೇಡ ಎಂದು ಸಿಬ್ಬಂಧಿ ಕೆಲ ದಿನಗಳ ಹಿಂದೆ ನಡೆದ ಸಭೆಯಲ್ಲಿ ಸ್ಪಷ್ಠಪಡಿಸಿ ಬೆಳಗಾವಿಗೆ ಮರಳಿದ್ದಾರೆ.
ಪ್ರತಿಭಟನೆ: ಬೆಳಗಾವಿ ಅರಣ್ಯ ವೃತ್ತದಲ್ಲಿ ನೌಕರರಿಗೆ ಆದ ಪದೋನ್ನತಿ ಅನ್ಯಾಯ ಹಾಗೂ ಅನುಭವಿಸುತ್ತಿರುವ ಮಾನಸಿಕ ಕಿರುಕುಳ ವಿರೋಧಿಸಿ ಸಿಸಿಎಫ್ ಮಂಜುನಾಥ ಚೌಹಾನ್ ವಿರುದ್ಧ ಹಾಗೂ ಸರಕಾರದ ಆದ್ಯ ಗಮನ ಸೆಳೆಯಲು ಡಿ. 6ರಂದು ನಗರದಲ್ಲಿ ಅರಣ್ಯ ಸಿಬ್ಬಂಧಿ ಪ್ರತಿಭಟನೆ ನಡೆಸಲಿದ್ದಾರೆ.
ಇಡೀ ರಾಜ್ಯದಾದ್ಯಂತ ಇಲ್ಲದೇ ಇರುವ ಬಡ್ತಿ ಕೊಡುವ ಸಮಸ್ಯೆ ಬೆಳಗಾವಿ ಅರಣ್ಯ ವೃತ್ತದಲ್ಲಿ ಯಾಕೆ ಉದ್ಭವಿಸಿದೆ, ಹಿರಿಯ ಅಧಿಕಾರಿಗಳು ನೌಕರರ ಬೇಡಿಕೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು ಯಾಕೆ ಎಂಬುವುದು ಯಕ್ಷ ಪ್ರಶ್ನೆಯಾಗಿದೆ. ನೌಕರರ ಬೇಡಿಕೆ ಮತ್ತು ಹೋರಾಟಕ್ಕೆ ಪೂರಕವಾಗಿ ಜನಪ್ರತಿನಿಧಿಗಳು ಹಾಗೂ ಸರಕಾರಿ ನೌಕರರ ಸಂಘಟನೆ ಹಾಗೂ ಸಾಮಾಜಿಕ ಸಂಘಟನೆಗಳ ಬೆಂಬಲ ಸೂಚಿಸಿರುವುದು ಪ್ರತಿಭಟನೆಯ ಕಾವು ಹೆಚ್ಚಿಸಲಿದೆ.
1983 ನೇ ಸಾಲಿನಿಂದ ಬೆಳಗಾವಿ ವೃತ್ತದಲ್ಲಿ ಒಟ್ಟು 21 ಪದೋನ್ನತಿ ಆದೇಶಗಳು ಇದ್ದು . ಜೇಷ್ಠತೆ ಮತ್ತು ಪದೋನ್ನತಿ ಕಾನೂನುಗಳ ಅನ್ವಯ ಈ ಆದೇಶಗಳನ್ನು ಮರುಪರಿಶೀಲಿಸಿ ಯಾವುದೇ ವರ್ಗದ ನೌಕರರಿಗೆ ಅನ್ಯಾಯ ಆಗದಂತೆ ಸೂಕ್ತ ನಿರ್ಧಾರ ಕೈಗೊಳ್ಳುವಲ್ಲಿ ಹಾಗೂ ಅಂತಿಮ ಜೇಷ್ಠತೆ ಪ್ರಕಟಿಸಲು ಮಾನ್ಯರಿಗೆ ಹಲವು ಬಾರಿ ವಿನಂತಿಸಿದರು ನಮ್ಮ ಬೇಡಿಕೆಗಳನ್ನು ಪೂರೈಸಿರುವುದಿಲ್ಲ. ಪ್ರತಿಭಟನೆಗೆ ಎಡೆ ಮಾಡಿಕೊಡದೇ ಸಿಬ್ಬಂದಿಗಳಿಗೆ ಅನ್ಯಾಯ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಲು ವಿನಂತಿಸುತ್ತೇನೆ.
ಎಸ್. ಎಸ್. ಗೌಡನೂರ
ಅಧ್ಯಕ್ಷರು, ಉಪ ವಲಯ ಅರಣ್ಯಾಧಿಕಾರಿಗಳ ಸಂಘ, ಬೆಳಗಾವಿ ವೃತ್ತ.



