ವರದಿ :ಸ್ಟೀಫನ್ ಜೇಮ್ಸ್.
ಬೆಳಗಾವಿ: ‘ರಾಜ್ಯದಲ್ಲೇ ದೊಡ್ಡದಾಗಿರುವ ವೀರಶೈವ ಲಿಂಗಾಯತ ಸಮುದಾಯ ಇಂದು ಕವಲುದಾರಿಯಲ್ಲಿ ಸಾಗಿದೆ. ಸಂಘಟನೆ ದೃಷ್ಟಿಯಿಂದ ನಾವೆಲ್ಲರೂ ಒಂದಾಗಿ, ಈ ಸಮುದಾಯ ಮುನ್ನಡೆಸಬೇಕಿದೆ’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಮಹಾಪ್ರಧಾನ ಕಾರ್ಯದರ್ಶಿಯೂ ಆಗಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ಇಲ್ಲಿನ ಸುಭಾಷ ನಗರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ನಿರ್ಮಿಸಿದ ‘ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರ ಉಚಿತ ವಸತಿ ನಿಲಯ’ ಉದ್ಘಾಟಿಸಿ ಅವರು ಮಾತನಾಡಿದರು.
‘ವೀರಶೈವ ಲಿಂಗಾಯತ ಸಮಾಜದ ಶಕ್ತಿ ದೊಡ್ಡದು. ಅನೇಕ ಮಠ-ಮಾನ್ಯಗಳು, ಕೆಎಲ್‌ಇ ಸಂಸ್ಥೆ, ಬಿಎಲ್‌ಡಿಇ ಸಂಸ್ಥೆ ಶಿಕ್ಷಣ ಕ್ಷೇತ್ರಕ್ಕೆ ಅಗಾಧವಾದ ಕೊಡುಗೆ ನೀಡಿವೆ. ಪ್ರಭಾಕರ ಕೋರೆ ಅವರು ಸಮಾಜದ ಬಡ ಹೆಣ್ಣು ಮಕ್ಕಳಿಗಾಗಿ ಉಚಿತ ವಸತಿ ನಿಲಯ ನಿರ್ಮಿಸಿರುವುದು ಸಂತಸದ ವಿಚಾರ. ಪ್ರತಿ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳಿಗೆ ಉಚಿತ ವಸತಿ ನಿಲಯ ನಿರ್ಮಿಸುವ ಸಂಕಲ್ಪವನ್ನು ಮಹಾಸಭೆ ಮಾಡಿದೆ. ಬೆಂಗಳೂರಿನಲ್ಲಿ 1 ಸಾವಿರ ವಿದ್ಯಾರ್ಥಿನಿಯರಿಗೆ ನಿಲಯ ನಿರ್ಮಿಸುವುದು ನಮ್ಮ ಗುರಿ’ ಎಂದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ‘ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಸಂಕಲ್ಪ ತೊಟ್ಟು ಅನೇಕ ಯೋಜನೆ ಜಾರಿಗೆ ತಂದ ಹೆಮ್ಮೆ ನನಗಿದೆ. ಕೆಎಲ್‌ಇ, ಬಿವಿಬಿ, ಬಿಎಲ್‌ಡಿಇ ಮತ್ತಿತರ ಸಂಸ್ಥೆಗಳು ಸಮಾಜಕ್ಕೆ ನೀಡಿದ ಕೊಡುಗೆ ಅನನ್ಯ’ ಎಂದು ಹೇಳಿದರು.
ಸಚಿವ ಡಾ.ಶರಣಪ್ರಕಾಶ ಪಾಟೀಲ, ‘ನಮ್ಮ ಸಮಾಜದ ಹೆಣ್ಣು ಮಕ್ಕಳು ಮುಂದೆ ಬರಬೇಕೆಂಬ ಆಸೆಯಿಂದ ಪ್ರಭಾಕರ ಕೋರೆ ಮಾಡಿದ ಸಂಕಲ್ಪ ದೊಡ್ಡದು. ಇಂದು ಮಕ್ಕಳಿಗೆ ವಚನ ಸಂಸ್ಕೃತಿ, ಲಿಂಗಪೂಜೆ ಕಲಿಸಬೇಕಿರುವುದು ಅಗತ್ಯವಾಗಿದೆ’ ಎಂದರು.
ಸಚಿವ ಎಂ.ಬಿ.ಪಾಟೀಲ, ‘ಪ್ರಭಾಕರ ಕೋರೆ ಇದು ಸಮಾಜಕ್ಕೆ ನೀಡಿದ ಬಹುದೊಡ್ಡ ಕೊಡುಗೆಯಾಗಿದೆ. ಶಿಕ್ಷಣ ರಂಗದಲ್ಲಿ ಅವರು ಮಾಡಿದ ಸೇವೆಯೂ ಶ್ಲಾಘನೀಯ’ ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ‘ಕೆಲವರು ನಮ್ಮ ಮಧ್ಯೆ ಒಡಕು ಉಂಟುಮಾಡಿ ಸಮಾಜ ಒಡೆಯುತ್ತಿದ್ದಾರೆ. ವೀರಶೈವ ಲಿಂಗಾಯತ ಒಂದು ಶಕ್ತಿಯಾಗಿ ರೂಪಗೊಳ್ಳುವುದು ಇಂದಿನ ಕಾಲದ ಅಗತ್ಯವಾಗಿದೆ’ ಎಂದು ಹೇಳಿದರು.
ದಾನಿಗಳಾದ ಡಾ.ಮಹೇಶ ಬೆಲ್ಲದ, ಅನಿತಾ ಬೆಲ್ಲದ ಅವರನ್ನು ಸತ್ಕರಿಸಲಾಯಿತು. ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಆಶೀರ್ವಚನ ನೀಡಿದರು. ಸಚಿವೆ ಲಕ್ಷ್ಮಿ ಹೆಬ್ಬಾಳಕರ, ಶಂಕರ ಬಿದರಿ, ಮಹೇಶ ಬೆಲ್ಲದ, ಶಾಸಕರಾದ ರಾಜು ಕಾಗೆ, ಮಹಾಂತೇಶ ಕೌಜಲಗಿ, ಶೈಲೇಂದ್ರ ಬೆಲ್ದಾಳೆ, ಎಂ.ವೈ.ಪಾಟೀಲ, ಗಣೇಶ ಹುಕ್ಕೇರಿ, ಬಿ.ಆರ್.ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಸುಶೀಲ್ ನಮೋಶಿ, ಹನುಮಂತ ನಿರಾಣಿ, ಚನ್ನರಾಜ ಹಟ್ಟಿಹೊಳಿ, ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಡಾ.ಎಚ್.ಬಿ.ರಾಜಶೇಖರ, ಆಶಾ ಕೋರೆ, ಎಂ.ಬಿ.ಝಿರಲಿ, ಜಗದೀಶ ಮೆಟಗುಡ್ಡ, ಡಾ.ಪ್ರೀತಿ ಕೋರೆ ಉಪಸ್ಥಿತರಿದ್ದರು. ಆಶಾ ಯಮಕನಮರಡಿ ನಿರೂಪಿಸಿದರು. ಗುರುದೇವಿ ಹುಲೆಪ್ಪನವರಮಠ ವಂದಿಸಿದರು.
₹3 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣ: ಕೋರೆ
‘ಪದವಿ, ಉನ್ನತ ಶಿಕ್ಷಣ ಪಡೆಯಲು ಬೆಳಗಾವಿಗೆ ಆಗಮಿಸುವ ಬಡ ಹೆಣ್ಣು ಮಕ್ಕಳಿಗಾಗಿ ವಸತಿ ನಿಲಯ ಸ್ಥಾಪಿಸಬೇಕು ಎಂಬುದು ನನ್ನ ಇಚ್ಛೆಯಾಗಿತ್ತು. ಇದಕ್ಕೆ ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 24 ಗುಂಟೆ ನಿವೇಶನವನ್ನು ಕಡಿಮೆ ಬೆಲೆಗೆ ದೊರಕಿಸಿಕೊಟ್ಟರು. ಇಂದು ₹3 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಂಡಿದೆ’ ಎಂದು ಮಹಾಸಭೆ ಉಪಾಧ್ಯಕ್ಷರೂ ಆಗಿರುವ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.
‘ಈ ಮಹತ್ಕಾರ್ಯಕ್ಕೆ ಅನೇಕ ದಾನಿಗಳು ಕೈಜೋಡಿಸಿದ್ದಾರೆ. ಅದರಲ್ಲೂ ಉದ್ಯಮಿ ಮಹೇಶ ಬೆಲ್ಲದ ₹1 ಕೋಟಿ ದಾನ ನೀಡಿದ್ದಾರೆ. ಹಾಗಾಗಿ ನಿಲಯಕ್ಕೆ ಅವರ ತಾಯಿ ನೆನಪಿಗಾಗಿ ‘ಲಿಂ.ಅನ್ನಪೂರ್ಣ ಬೆಲ್ಲದ, ಕಟ್ಟೂರ’ ಎಂದು ನಾಮಕರಣ ಮಾಡಿದ್ದೇವೆ. ನಿಲಯದಲ್ಲಿನ 21 ಕೊಠಡಿಗಳಿಗೆ ಒಬ್ಬೊಬ್ಬ ದಾನಿ ಹೆಸರು ನಾಮಕರಣ ಮಾಡಲಾಗುವುದು’ ಎಂದರು



