ವಾಷಿಂಗ್ಟನ್: ರಷ್ಯಾ-ಉಕ್ರೇನ್ ಸಂಘರ್ಷವು ಜಾಗತಿಕ ದುರಂತಕ್ಕೆ ಕಾರಣವಾಗಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಎಚ್ಚರಿಕೆ ನೀಡಿದ್ದು, ದೀರ್ಘಕಾಲದ ಯುದ್ಧವು ಮೂರನೇ ಮಹಾಯುದ್ಧದಲ್ಲಿ ಕೊನೆಗೊಳ್ಳಬಹುದು ಎಂದು ಹೇಳಿದ್ದಾರೆ. ರಾಜ್ಯ ಮಟ್ಟದ AI ನಿಯಮಗಳ “ಪ್ಯಾಚ್‌ವರ್ಕ್” ಅನ್ನು ತಡೆಯುವ ಗುರಿಯನ್ನು ಹೊಂದಿರುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿದ ನಂತರ ಶ್ವೇತಭವನದಲ್ಲಿ ವರದಿಗಾರರೊಂದಿಗಿನ ಸಂವಾದದ ಸಂದರ್ಭದಲ್ಲಿ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.
ಈ ವೇಳೆ ಯುದ್ಧದಲ್ಲಿ ಸಂಭವಿಸುತ್ತಿರುವ ಸಾವು ನೋವುಗಳ ಪ್ರಮಾಣದಿಂದ ನನಗೆ ಬೇಸರ ಉಂಟಾಗಿದೆ, ಕಳೆದ ಒಂದು ತಿಂಗಳಿನಲ್ಲಿಯೇ ಅಂದಾಜು 25,000 ಜನರು, ಹೆಚ್ಚಾಗಿ ಸೈನಿಕರು ಸಾವನ್ನಪ್ಪಿದ್ದು, ಈ ಹತ್ಯೆ ನಿಲ್ಲುವುದನ್ನು ನಾನು ನೋಡಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಕಳೆದ ತಿಂಗಳು ಇಪ್ಪತ್ತೈದು ಸಾವಿರ ಜನರು ಸತ್ತರು… ಅದು ಕೊನೆಗೊಳ್ಳುವುದನ್ನು ನೋಡಲು ನಾನು ಇಷ್ಟಪಡುತ್ತೇನೆ. ಯುದ್ಧ ನಿಲ್ಲಿಸಲು ನಾವು ಶ್ರಮಪಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇದಕ್ಕೂ ಮೊದಲು, ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೀವಿಟ್, ರಷ್ಯಾ- ಉಕ್ರೇನ್ ಯುದ್ಧ ನಿಲ್ಲಿಸುವ ಕುರಿತು ಮಾತನಾಡಿದ್ದರು. ಇನ್ನೂ ನಾಲ್ಕು ವರ್ಷಗಳ ಯುದ್ಧದಲ್ಲಿ ಅಮೆರಿಕ ಮಧ್ಯಸ್ಥಿಕೆ ಪ್ರಯತ್ನಗಳನ್ನು ಮುನ್ನಡೆಸುತ್ತಿರುವುದರಿಂದ ಟ್ರಂಪ್ ಫಲಿತಾಂಶ ಬಯಸುತ್ತಾರೆ. ಟ್ರಂಪ್ ಬುಧವಾರ ಯುರೋಪಿಯನ್ ನಾಯಕರೊಂದಿಗೆ ಚರ್ಚೆ ನಡೆಸಿದ್ದಾರೆ ಮತ್ತು ಅಮೆರಿಕದ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ತಂಡ ಮತ್ತೊಮ್ಮೆ ಮಾತುಕತೆ ನಡೆಸಲಿದೆ ಎಂದು ಹೇಳಿದ್ದಾರೆ.
ತನ್ಮಧ್ಯೆ, ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಉಕ್ರೇನಿಯನ್ ನಿಯಂತ್ರಿತ ಪೂರ್ವ ಪ್ರದೇಶಗಳಲ್ಲಿ ಮುಕ್ತ ಆರ್ಥಿಕ ವಲಯವನ್ನು ರಚಿಸಲು ಡೊನೆಟ್ಸ್ಕ್‌ನ ಕೆಲವು ಭಾಗಗಳಿಂದ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ವಾಷಿಂಗ್ಟನ್ ಕೈವ್‌ಗೆ ಒತ್ತಾಯಿಸುತ್ತಿದೆ ಎಂದು ಹೇಳಿದ್ದಾರೆ. ಈ ಸಂಬಂಧ ಉಕ್ರೇನ್ ಅಮೆರಿಕದ ಅಧಿಕಾರಿಗಳಿಗೆ 20 ಅಂಶಗಳ ಪ್ರತಿ-ಪ್ರಸ್ತಾಪಗಳನ್ನು ಸಲ್ಲಿಸಿದೆ ಎಂದು ಝೆಲೆನ್ಸ್ಕಿ ದೃಢಪಡಿಸಿದ್ದು, ಯಾವುದೇ ಪ್ರಾದೇಶಿಕ ರಾಜಿಗೆ ರಾಷ್ಟ್ರೀಯ ಜನಾಭಿಪ್ರಾಯ ಸಂಗ್ರಹಣೆಯ ಮೂಲಕ ಅನುಮೋದನೆ ಅಗತ್ಯವಿರುತ್ತದೆ ಎಂದು ಒತ್ತಿ ಹೇಳಿದ್ದಾರೆ.



