ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಕಿತ್ತಾಟ ತೀವ್ರಗೊಂಡಿದ್ದು, ಎರಡು ಬಣದ ಶಾಸಕರು ಬಹಿರಂಗವಾಗಿ ಹೇಳಿಕೆ, ಪ್ರತಿ ಹೇಳಿಕೆಗಳನ್ನು ನೀಡುವ ಮೂಲಕ ಹಗ್ಗ ಜಗ್ಗಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ ಗೊಂದಲದಿಂದ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಹಿನ್ನಡೆಯಾಗುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಹೈಕಮಾಂಡ್ ಗೆ ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಭಾನುವಾರ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿದ್ದು, ಇದೇ ಸಂದರ್ಭದಲ್ಲಿ ಲಿಖಿತವಾಗಿ ಹೈಕಮಾಂಡ್ ನಾಯಕರಿಗೆ ದೂರು ನೀಡಲು ಮುಂದಾಗಿದ್ದಾರೆ. ಈ ವೇಳೆ ನಾಯಕತ್ವ ಬದಲಾವಣೆಯ ಬಗ್ಗೆ ಎರಡು ಬಣದ ಶಾಸಕರ ಬಹಿರಂಗ ಹೇಳಿಕೆಗೆ ಕಡಿವಾಣ ಹಾಕಬೇಕು. ಇದು ತೀವ್ರಗೊಂಡರೆ ಸಮಸ್ಯೆ ಉಲ್ಬಣಗೊಳ್ಳಲಿದೆ. ಹೀಗಾಗಿ ಹೈಕಮಾಂಡ್ ಮಧ್ಯಪ್ರವೇಶ ಮಾಡಬೇಕು ಎಂಬುದು ಆಗ್ರಹವಾಗಿದೆ ಎಂದಿದ್ದಾರೆ.
ಇನ್ನೂ ನಾಯಕತ್ವ ಬದಲಾವಣೆ ಬಗ್ಗೆ ಬಹಿರಂಗ ಚರ್ಚೆ ಕೊಂಚ ಕಡಿಮೆ ಆಗಿತ್ತು. ಆದರೆ ಇದೀಗ ಹೇಳಿಕೆಗಳ ಭರಾಟೆ ತೀವ್ರಗೊಂಡಿದೆ. ಈ ಕುರಿತು ಶಾಸಕ ಮಾಗಡಿ ಬಾಲಕೃಷ್ಣ ಮಾತನಾಡಿ, ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮಿನಿಮಮ್ ಕಾಮನ್ ಸೆನ್ಸ್ ಇಲ್ಲ ಎಂದು ಬಾಲಕೃಷ್ಣ ಅಸಮಾಧಾನ ವ್ಯಕ್ತಪಡಿಸಿದ್ದು, ದೊಡ್ಡವರಿಗೆ ಒಂದು ನ್ಯಾಯ ಚಿಕ್ಕವರಿಗೆ ಒಂದು ನ್ಯಾಯ ಆಗುತ್ತದೆ. ಅದಕ್ಕೆ ನಮ್ಮ ಇಕ್ಬಾಲ್ ಹುಸೇನ್ ಅದ್ಬುತವಾಗಿ ಹೇಳಿದ್ದಾರೆ. ನಾವು ಮಾತನಾಡಿದ್ರೆ ಬಲಾತ್ಕಾರ, ಅವರು ಮಾತನಾಡಿದ್ರೆ ಚಮತ್ಕಾರ ಅಂದಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ.
ಈ ನಡುವೆ ಶಾಸಕ ಇಕ್ಬಾಲ್ ಹುಸೇನ್, ಡಿ.ಕೆ ಶಿವಕುಮಾರ್ ಪರವಾಗಿ ಭರ್ಜರಿ ಬ್ಯಾಟಿಂಗ್ ಮಾಡಿದ್ದು, ಸಂಕ್ರಾಂತಿ ಅಲ್ಲ, ಅಧಿವೇಶನ ಮುಗಿದ ಕೂಡಲೇ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರೆ ಎಂದು ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ. ಇನ್ನು ಗುರುವಾರ ಡಿಕೆ ಶಿವಕುಮಾರ್ ಆಪ್ತರೊಬ್ಬರು ಬೆಳಗಾವಿ ಖಾಸಗಿ ಹೋಟೆಲ್ ನಲ್ಲಿ ಡಿನ್ನರ್ ಮೀಟಿಂಗ್ ಹಮ್ಮಿಕೊಂಡಿದ್ದರು. ರಾತ್ರಿ ಔತಣ ಕೂಟದಲ್ಲಿ ಡಿಕೆ ಶಿವಕುಮಾರ್ ಆಪ್ತರು ಭಾಗಿಯಾಗಿದ್ದರು. ಇದು ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿದೆ ಎಂದು ಹೇಳಲಾಗುತ್ತಿದೆ.



