ಹೊಸದಿಲ್ಲಿ: ಗ್ರಾಮೀಣ ಜನರ ಜೀವನಾಧಾರವಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಯನ್ನು ರದ್ದುಗೊಳಿಸಿ, ಅದರ ಬದಲಿಗೆ ನೂತನ ‘ಜಿ ರಾಮ್ ಜಿ’ ಮಸೂದೆಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದ್ದು, ಈ ನಡೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಪ್ರಧಾನಿ ಮೋದಿಯವರಿಗೆ ಎರಡು ವಿಷಯಗಳ ಬಗ್ಗೆ ಆಳವಾದ ದ್ವೇಷವಿದೆ. ಒಂದು ಮಹಾತ್ಮ ಗಾಂಧಿಯವರ ವಿಚಾರಧಾರೆಗಳು, ಇನ್ನೊಂದು ಬಡವರ ಹಕ್ಕುಗಳು,” ಎಂದು ಜರಿದಿದ್ದಾರೆ. ನರೇಗಾ ಯೋಜನೆಯು ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯದ ಕನಸಿನ ಜೀವಂತ ಸಾಕ್ಷಿಯಾಗಿದೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಕೋಟ್ಯಂತರ ಗ್ರಾಮೀಣ ಜನರಿಗೆ ಇದು ಆರ್ಥಿಕ ಗುರಾಣಿಯಾಗಿ ರಕ್ಷಣೆ ನೀಡಿತ್ತು ಎಂದು ರಾಹುಲ್ ಈ ವೇಳೆ ಸ್ಮರಿಸಿದ್ದಾರೆ.
ಇನ್ನೂ ಕಳೆದ 10 ವರ್ಷಗಳಿಂದ ಈ ಯೋಜನೆಯನ್ನು ದುರ್ಬಲಗೊಳಿಸಲು ಮೋದಿ ಪ್ರಯತ್ನಿಸುತ್ತಲೇ ಬಂದಿದ್ದಾರೆ. ಇದೀಗ ಮಹಾತ್ಮ ಗಾಂಧಿಯವರ ಹೆಸರನ್ನು ಯೋಜನೆಯಿಂದ ತೆಗೆದುಹಾಕಿ, ಬಡವರ ಬದುಕನ್ನು ಸಂಪೂರ್ಣವಾಗಿ ಕಸಿದುಕೊಳ್ಳಲು ನಿರ್ಧರಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ಹಳೆಯ ನರೇಗಾ ಯೋಜನೆಯಲ್ಲಿ ಉದ್ಯೋಗದ ಹಕ್ಕು ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ನಿರ್ಧರಿಸುವ ಸ್ವಾತಂತ್ರ್ಯ ಗ್ರಾಮಗಳಿಗಿತ್ತು. ಅಲ್ಲದೆ, ಕೂಲಿ ಮತ್ತು ಸಾಮಗ್ರಿಗಳ ಶೇ. 75ರಷ್ಟು ವೆಚ್ಚವನ್ನು ಕೇಂದ್ರವೇ ಭರಿಸುತ್ತಿತ್ತು. ಆದರೆ, ರಾಹುಲ್ ಗಾಂಧಿ ಅವರ ಪ್ರಕಾರ, ಹೊಸ ಮಸೂದೆಯ ಮೂಲಕ ಪ್ರಧಾನಿ ಮೋದಿ ಎಲ್ಲಾ ಅಧಿಕಾರವನ್ನು ತಮ್ಮ ಕೈಯಲ್ಲಿ ಇಟ್ಟುಕೊಳ್ಳಲು ಬಯಸುತ್ತಿದ್ದಾರೆ. ಬಜೆಟ್, ಯೋಜನೆಗಳು ಮತ್ತು ನಿಯಮಗಳನ್ನು ಇನ್ನು ಮುಂದೆ ಕೇಂದ್ರವೇ ನಿರ್ಧರಿಸುತ್ತದೆ. ಆದರೆ ರಾಜ್ಯಗಳು ಶೇ. 40ರಷ್ಟು ವೆಚ್ಚವನ್ನು ಬಲವಂತವಾಗಿ ಭರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಹೊಸ ‘ಜಿ ರಾಮ್ ಜಿ’ ಮಸೂದೆಯ ಪ್ರಕಾರ, ಯೋಜನೆಯ ಹಣಕಾಸಿನ ಸ್ವರೂಪದಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಹಳೆಯ ಪದ್ಧತಿಯಲ್ಲಿ ಕಾರ್ಮಿಕರಿಗೆ ನೀಡುವ ಕೂಲಿಯ ಶೇ. 100ರಷ್ಟು ಹಣವನ್ನು ಕೇಂದ್ರ ಸರ್ಕಾರವೇ ನೀಡುತ್ತಿತ್ತು. ಹೊಸ ಪದ್ಧತಿಯಲ್ಲಿ ಈಗ ರಾಜ್ಯ ಸರ್ಕಾರಗಳು ಒಟ್ಟು ವೆಚ್ಚದ ಶೇ. 40 ರಷ್ಟನ್ನು ಭರಿಸಲೇಬೇಕಿದೆ. ಕೇಂದ್ರದ ಈ ನಿರ್ಧಾರಕ್ಕೆ ಆಂಧ್ರ ಪ್ರದೇಶದ ಆಡಳಿತಾರೂಢ ಟಿಡಿಪಿ ಸೇರಿದಂತೆ ಹಲವು ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಇದು ರಾಜ್ಯಗಳ ಬಜೆಟ್ ಮೇಲೆ ತೀವ್ರ ಹೊರೆ ಉಂಟುಮಾಡುತ್ತದೆ ಎಂದು ವಾದಿಸಿವೆ.
ಈ ವೇಳೆ ಈಶಾನ್ಯ ಮತ್ತು ಹಿಮಾಲಯನ್ ರಾಜ್ಯಗಳಿಗೆ 90:10 ಅನುಪಾತವಿದ್ದರೆ, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರವೇ ಸಂಪೂರ್ಣ ಹಣ ನೀಡಲಿದೆ. ಅಂದಾಜಿನ ಪ್ರಕಾರ, ವಾರ್ಷಿಕ 1.51 ಲಕ್ಷ ಕೋಟಿ ರೂ. ವೆಚ್ಚದಲ್ಲಿ, ಮೋದಿ ಸರ್ಕಾರ ಇನ್ಮುಂದೆ ಕೇವಲ 95,692 ಕೋಟಿ ರೂ.ಗಳನ್ನು ಮಾತ್ರ ಭರಿಸಲಿದೆ. ವಿಪಕ್ಷಗಳ ವಿರೋಧದ ನಡುವೆಯೂ, ಸರ್ಕಾರಿ ಮೂಲಗಳು ‘ಜಿ ರಾಮ್ ಜಿ’ ಮಸೂದೆಯು ‘ವಿಕ್ಷಿತ್ ಭಾರತ್ 2047’ರ ದೂರದೃಷ್ಟಿಗೆ ಅನುಗುಣವಾಗಿದ್ದು, ಬೇಡಿಕೆ ಆಧಾರಿತ ಮಾದರಿಯಿಂದ ನಿರ್ದಿಷ್ಟ ಅನುದಾನ ಮಾದರಿಗೆ ಬದಲಾಗುತ್ತಿರುವುದು ಆರ್ಥಿಕ ಶಿಸ್ತಿನ ಕ್ರಮವಾಗಿದೆ ಎಂದು ಸಮರ್ಥಿಸಿಕೊಂಡಿದೆ ಎನ್ನಲಾಗಿದೆ.



