ಬೆಳಗಾವಿ: ಸಿಎಂ ಸಿದ್ದರಾಮಯ್ಯ ಅವರಿಗೆ ದೈಹಿಕ ನಿಶಕ್ತಿ ಅಲ್ಲ, ರಾಜಕೀಯ ನಿಶಕ್ತಿ ಇದೆ ಎಂದು ವಿಧಾನಸಭೆಯಲ್ಲಿ ವಿಪಕ್ಷದ ಸದಸ್ಯರು ಕಾಲೆಳೆದ ಪ್ರಸಂಗ ನಡೆದಿದ್ದು, ಉತ್ತರ ಕರ್ನಾಟಕದ ಬಗೆಗಿನ ಚರ್ಚೆಗೆ ಸದನದಲ್ಲಿ ಉತ್ತರ ಕೊಡುತ್ತಿದ್ದ ಸಂದರ್ಭದಲ್ಲಿ ಸ್ವಾರಸ್ಯಕರ ಚರ್ಚೆಗೆ ಸಾಕ್ಷಿಯಾಗಿದೆ. ಉತ್ತರ ಕರ್ನಾಟಕ ಚರ್ಚೆಗೆ ಗುರುವಾರ ಉತ್ತರ ಕೊಡಬೇಕಿತ್ತು. ಆದರೆ ಸ್ವಲ್ಪ ದೈಹಿಕ ನಿಶಕ್ತಿ ಇತ್ತು ಎಂದರು.
ಈ ವೇಳೆ ಮಧ್ಯ ಪ್ರವೇಶ ಮಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಈಗ ಶಕ್ತಿ ಬಂದಿದ್ಯಾ? ನಿಮಗೆ ರಾಜಕೀಯವಾಗಿ ಶಕ್ತಿ ಬಂದಿದೆ. ನಿಶಕ್ತಿ ಹೋಗಿದೆ. ನಾಲ್ಕು ದಿನ ಶಕ್ತಿ ಕಡಿಮೆ ಇತ್ತು, ಆದರೆ ಈಗ ಶಕ್ತಿ ಬಂದಿದೆ ಎಂದು ಕಾಲೆಳೆದಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, “ರಾಜಕೀಯ ನಿಶಕ್ತಿ ಸಾಧ್ಯ ಇಲ್ಲ. ಅಂತಹ ಸಂದರ್ಭ ಬರಲ್ಲ. ಶಾರೀರಿಕವಾದ ನಿಶಕ್ತಿ ಬರುತ್ತದೆ” ಎಂದಿದ್ದಾರೆ.
ಈ ವೇಳೆ ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಮಾತನಾಡಿ, “ರಾಜಕೀಯವಾಗಿ ನಿಶಕ್ತಿ ಆಗಿದ್ದೀರಿ ಎಂಬ ಚರ್ಚೆ ಇದೆ” ಎಂದು ಕಿಚಾಯಿಸಿದ್ದು, ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, “ರಾಜಕೀಯ ನಿಶಕ್ತಿ ಯಾವಾಗಲೂ ಇಲ್ಲ. ರಾಜಕೀಯ ಅಷ್ಟೊಂದು ತಲೆ ಕೆಡಿಸಿಕೊಂಡು ಮಾಡಬೇಕಾಗ ಅಗತ್ಯ ಇಲ್ಲ. ರಾಜಕೀಯ ಶಕ್ತಿ ಜನರು ಕೊಡುವುದು. ಪ್ರಜಾಪ್ರಭುತ್ವದಲ್ಲಿ ಜನರೇ ಮಾಲೀಕರು” ಎಂದು ಹೇಳಿದರು.
ಅಲ್ಲದೆ, ಅಂತಿಮ ತೀರ್ಪು ಕೊಡುವವರು ಜನರೇ. ರಾಜಕೀಯ ನಿಶಕ್ತಿ ಪದ ನನ್ನ ಹತ್ರ ಇಲ್ಲ. ಹಿಂದೆಯೂ ಇಲ್ಲ, ಈಗಲೂ ಇಲ್ಲ, ಮುಂದೆಯೂ ಇಲ್ಲ. ಹಾಗೆ ತಿಳಿದುಕೊಂಡರೆ ಅದು ತಪ್ಪು ಮಾಹಿತಿ ಎಂದು ತಿರುಗೇಟು ನೀಡಿದ್ದಾರೆ. ಈ ಸಂದರ್ಭದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ನೀವು ಅಭಿನಂದನೆ ಸಲ್ಲಿಸುತ್ತಿರುವುದನ್ನು ನೋಡಿದರೆ ಐದು ವರ್ಷ ಇರಲ್ಲ, ವಿದಾಯ ಭಾಷಣ ಮಾಡುತ್ತಿದ್ದೀರಿ ಎಂದು ಅನ್ನಿಸುತ್ತಿದೆ ಎಂದು ಕಾಲೆಳೆದಿದ್ದಾರೆ.
ಅದಕ್ಕೆ ಯತ್ನಾಳ್ ಅವರನ್ನು ಪಕ್ಷದಿಂದ ಹೊರ ಹಾಕಲಾಗಿದೆ ಎಂದು ಸಿದ್ದರಾಮಯ್ಯ ಈ ವೇಳೆ ತಿರುಗೇಟು ನೀಡಿದ್ದು, ಪ್ರತಿಕ್ರಿಯೆ ನೀಡಿದ ಯತ್ನಾಳ್ ನಿಮ್ಮನ್ನು ಕೂಡಾ ಈ ಹಿಂದೆ ಪಕ್ಷದಲ್ಲಿ ಕುತಂತ್ರದಿಂದ ಹೊರಹಾಕಿದ್ದರು, ನೀವು ಸಿಎಂ ಆಗಿಲ್ವಾ? ಎಂದು ಕಿಚಾಯಿಸಿದ್ದು, ಇವಾಗ ಕ್ಲಿಯರ್ ಆಯ್ತು ಸಿದ್ದರಾಮಯ್ಯ ಐದು ವರ್ಷ ಇರ್ತಾರೆ ಎಂದು ಟಾಂಗ್ ನೀಡಿದ್ದಾರೆ.



