ಬೆಳಗಾವಿ : ರೈತರಿಗೆ 1 ಲೀಟರ್ ಹಾಲಿಗೆ ಸಹಾಯಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಕರ್ನಾಟಕ ಸರ್ಕಾರದ ಕ್ಷೀರಧಾರೆ ಯೋಜನೆಯಡಿ ಹಾಲು ಉತ್ಪಾದಕ ರೈತರಿಗೆ ಪ್ರತಿ ಲೀಟರ್‌ಗೆ ₹5 ಪ್ರೋತ್ಸಾಹಧನ ನೀಡುತ್ತಿತ್ತು ಈ ಕುರಿತಂತೆ ಇಂದು ಸುವರ್ಣಸೌಧದಲ್ಲಿ ಹಾಲು ಉತ್ಪಾದಕರಿಗೆ ನೀಡುತ್ತಿರುವ ಪ್ರೋತ್ಸಾಹ ಧನ ಬಗ್ಗೆ ಕುತೂಹಲಕಾರಿ ಚರ್ಚೆ ನಡೆದಿದ್ದು, ಈ ನಡುವೆ ಸಿಎಂ ಸಿದ್ದರಾಮಯ್ಯ ಅವರು ರೈತರಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು, ರೈತರಿಗೆ ನೀಡುತ್ತಿರುವ ಪ್ರೋತ್ಸಾಹ ಧನದ ಕುರಿತಂತೆ ಪ್ರಸ್ತಾಪ ಮಾಡಿದ್ದರು. ಈ ಬಗ್ಗೆ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ರೈತರಿಗೆ ಒಂದು ಲೀಟರ್ ನೀಡುತ್ತಿರುವ ಪ್ರೋತ್ಸಾಹ ಧನವನ್ನು 7 ರೂಪಾಯಿಗೆ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಸರ್ಕಾರ ಅಧಿಕಾರಕ್ಕೆ ಬಂದು ಅರ್ಧ ಅವಧಿಯೇ ಕಳೆದಿದ್ದರು ಇದುವರೆಗೂ ರೈತರಿಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು ಹೆಚ್ಚಿಸಿಲ್ಲ ಎಂದು ತಿಳಿಸಿದರು.
ಅಶೋಕ್ ಅವರ ಈ ಹೇಳಿಕೆಗೆ ಸದನದಲ್ಲಿ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ, ಪ್ರಣಾಳಿಕೆಯಲ್ಲಿ ಹೇಳಿದಂತೆ 7 ರೂಪಾಯಿ ಕೊಟ್ಟಿಲ್ಲ ಎಂದಿದ್ದಾರೆ. ಯಡಿಯೂರಪ್ಪ ಅವರು ಇದ್ದಾಗ 3 ರೂಪಾಯಿ ಕೊಡುತ್ತಿದ್ದರು. ಅದನ್ನು 5 ರೂಪಾಯಿ ಮಾಡಿದ್ದೇವು. ಈ ಬಾರಿ ನಾವು ಅಧಿಕಾರಕ್ಕೆ ಬಂದ ಬಳಿಕ ಮೊದಲು 3 ರೂಪಾಯಿ, ಆ ಬಳಿಕ 4 ರೂಪಾಯಿ ಹಾಲಿನ ದರ ಹೆಚ್ಚಳ ಮಾಡಿ ಪೂರ್ತಿ ಹಣವನ್ನು ರೈತರಿಗೆ ಕೊಡಿಸಿದ್ದೇವೆ ಎಂದು ಹೇಳಿದರು.
ಅಲ್ಲದೇ, ಏಳು ರೂಪಾಯಿ ಕೊಡಬೇಕೆಂದು ಬೇಡಿಕೆ ಇದೆ. ಈ ಅವಧಿಯಲ್ಲಿ ರೈತರಿಗೆ ಏಳು ರೂಪಾಯಿ ಪ್ರೋತ್ಸಾಹ ಧನ ಕೊಡ್ತೀವಿ. ಪ್ರಣಾಳಿಕೆ ಮಾಡೋದು ಐದು ವರ್ಷಕ್ಕೆ. ನಮ್ಮ ಸರ್ಕಾರದ ಅವಧಿ ಮುಕ್ತಾಯ ಆಗುವ ವೇಳೆ 7 ರೂಪಾಯಿ ಮಾಡ್ತೇವೆ ಎಂದು ಹೇಳುವ ಮೂಲ ವಿಧಾನಸಭೆಯಲ್ಲಿ ರೈತರಿಗೆ ಸಿಎಂ ಸಿಹಿ ಸುದ್ದಿ ನೀಡಿದರು.
ಉತ್ತರ ಕರ್ನಾಟಕದಲ್ಲಿ ಡೈರಿ ಚಟುವಟಿಕೆಗಳು ಕಡಿಮೆಯಿದ್ದು, ಬೆಂಗಳೂರು ಮಿಲ್ಕ್ ಯೂನಿಯನ್ ನಲ್ಲಿ ನಿತ್ಯ 17 ಲಕ್ಷಕ್ಕೂ ಹೆಚ್ಚು ಲೀಟರ್ ಹಾಲು ಉತ್ಪಾದನೆ ಆಗುತ್ತೆ. ಬೀದರ್, ಯಾದಗಿರಿ, ಕಲಬುಗರಿ ಯೂನಿಯನ್ ನಲ್ಲಿ 67 ಸಾವಿರ ಲೀಟರ್ ಉತ್ಪಾದನೆ ಆಗುತ್ತೆ. ನಾನು 1985ರಲ್ಲಿ ಸಚಿವನಾಗಿದ್ದ ಕಾಲದಲ್ಲೂ ಕಡಿಮೆ ಇತ್ತು, ಈಗಲೂ ಕಡಿಮೆ ಇದೆ. ಇಂದಿಗೂ ಅಷ್ಟು ವ್ಯತ್ಯಾಸ ಇದೆ. ಎರಡು ಹಸು ಸಾಕುವವರಿಗೆ 20ಕೆಜಿ ಹಾಲು ಬರುತ್ತದೆ. ಇದರಲ್ಲಿ ಶೇಕಡಾ 50ರಷ್ಟು ಖರ್ಚು ಆದರೂ ಕೂಡ ಅರ್ಧ ಲಾಭ ಉಳಿಯುತ್ತದೆ.
ಇನ್ನೂ ಹಳೆ ಮೈಸೂರು ಭಾಗದಲ್ಲಿ ಈಗ ಒಂದು ಕೋಟಿ ಲೀಟರ್ ಗೂ ಹೆಚ್ಚು ಹಾಲು ಉತ್ಪಾದನೆ ಆಗುತ್ತಿದೆ. 10 ಲಕ್ಷಕ್ಕೂ ಹೆಚ್ಚು ಲೀಟರ್ ಹಾಲು ಉತ್ತರ ಭಾಗದಲ್ಲಿ ಆಗುತ್ತದೆ ಎಂದು ಸಿಎಂ ವಿವರಿಸಿದರು. ನಿಮ್ಮ ಕಾಲದಲ್ಲಿ 630 ಕೋಟಿ ರೂಪಾಯಿಗಳನ್ನು ಬಿಟ್ಟು ಹೋಗಿದ್ದೀರಿ. ಆದರೆ ಅದನ್ನು ಎಲ್ಲಾವನ್ನು ನಾವೇ ತೀರಿಸಿದ್ದೇವೆ. ಒಂದು ದಿನಕ್ಕೆ ಐದು ಕೋಟಿ ರೂಪಾಯಿ ಪ್ರೋತ್ಸಾಹ ಧನವನ್ನು ನೀಡುತ್ತಿದ್ದೇವೆ. ಎಲ್ಲಾ ಮಿಲ್ಕ್ ಯೂನಿಯನ್ ಗಳಿಗೆ ಸರ್ಕಾರದಿಂದ ದುಡ್ಡು ಕೊಡಿಸಿದ್ದೀವಿ. ಇವರು 2108ರಲ್ಲಿ 600 ಭರವಸೆ ಕೊಟ್ಟು ಬರೀ 60 ಭರವಸೆಗಳನ್ನು ಈಡೇರಿಸಿದ್ದಾರೆ. ಇವರಿಗೆ ಏನು ನೈತಿಕತೆ ಇದೆ ನಮ್ಮ ಬಗ್ಗೆ ಮಾತಾಡೋಕೆ ಎಂದು ಸದನದಲ್ಲಿ ಬಿಜೆಪಿಯವರಿಗೆ ಸಿಎಂ ತಿರುಗೇಟು ನೀಡಿದರು.
ಅದಲ್ಲದೇ ಉತ್ತರ ಕರ್ನಾಟಕದ ಅಸಮತೋಲನ ಹೋಗಲಾಡಿಸಲು ನಂಜುಂಡಪ್ಪ ವರದಿ ಜಾರಿ ಮಾಡಿದ್ದೇವೆ. ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಲಿ ಮಾಡಬೇಕು. 5000 ಕೋಟಿ ಕೊಡಬೇಕೆಂದು ಎಲ್ಲಾ ಪಕ್ಷದ ಶಾಸಕರು ಕೇಳಿದ್ದಾರೆ. ಪ್ರೊ ಗೋವಿಂದ ರಾವ್ ಕಮಿಟಿ ರವರ ವರದಿ ಬರಲಿ, ಆ ವರದಿ ಕೊಟ್ಟ ನಂತರ ಯಾವ ಜಿಲ್ಲೆಗಳು ಹಿಂದುಳಿದಿವೆ, ಅದನ್ನು ನೋಡಿ ಮಾಡುತ್ತೇನೆ. ಅಸಮತೋಲನ ಸರಿಪಡಿಸಲೆಂದೇ ಗೋವಿಂದ ರಾವ್ ಕಮಿಟಿ ಮಾಡಿಸಿದ್ದೇವೆ. 2026 ಜನವರಿ ತಿಂಗಳಲ್ಲೇ ಅವರು ವರದಿ ಕೊಡುತ್ತಾರೆ, ವಿಳಂಬ ಆಗೋದಿಲ್ಲ, ಅವರು ವರದಿ ಕೊಟ್ಟೆ ಕೊಡ್ತಾರೆ. ವರದಿ ನೋಡಿ ಜಾರಿ ಮಾಡೇ ಮಾಡ್ತೀವಿ ಎಂದು ಈ ವೇಳೆ ಸಿಎಂ ತಿಳಿಸಿದ್ದಾರೆ.



