ನಂಜನಗೂಡು : ತಾಲೂಕಿನ ಸಿಂಧುವಳ್ಳಿ ಗ್ರಾಮದಲ್ಲಿ ಮೇಯಲು ಬಿಟ್ಟ ಕುರಿಗಳ ಮೇಲೆ ಚಿರತೆಯೊಂದು ದಾಳಿ ನಡೆಸಿದ್ದು ಒಂದು ಕುರಿ ಸಾವನ್ನಪ್ಪಿ, ಇನ್ನೊಂದು ಕುರಿ ಗಾಯಗೊಂಡ ಘಟನೆ ನಡೆದಿದೆ.
ನಂಜನಗೂಡಿನ ಸಿಂಧುವಳ್ಳಿ ಗ್ರಾಮದಲ್ಲಿ ರೈತ ಮಹದೇವಯ್ಯ ಎಂಬವರ ಕುರಿ ಮರಿಗಳ ಮೇಲೆ ಚಿರತೆ ದಾಳಿ ನಡೆಸಿದೆ. ಕುರಿಗಳನ್ನು ಮೇಯಿಸಲು ಕೊಂಡೊಯ್ದ ವೇಳೆ ಚಿರತೆ ದಾಳಿ ನಡೆಸಿದೆ. ಒಂದು ಕುರಿಯ ಮೇಲೆ ದಾಳಿ ನಡೆಸುತ್ತಿದ್ದಂತೆ ಅಕ್ಕಪದಕ್ಕದಲ್ಲಿದ್ದ ಕುರಿಗಳು ದಿಕ್ಕಾಪಾಲಾಗಿ ಓಡಿವೆ. ಆದರೂ ಕೂಡ ಚಿರತೆ ದಾಳಿಗೆ ಒಂದು ಕುರಿ ಸಾವನ್ನಪ್ಪಿದ್ದು ಅದನ್ನು ತಿಂದು, ಇನ್ನೊಂದು ಕುರಿಯನ್ನು ಗಾಯಗೊಳಿಸಿ ಜನರ ಗದ್ದಲ ಕೇಳುತ್ತಿದ್ದಂತೆ ಪರಾರಿಯಾಗಿದೆ.
ಘಟನೆ ಬಳಿಕ ಗ್ರಾಮಸ್ಥರಲ್ಲಿ ಆತಂಕ ಎದುರಾಗಿದ್ದು, ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ದಟ್ಟವಾಗಿ ಕಾಡು ಬೆಳೆದಂತಿದ್ದ ಜಾಗವನ್ನು ಸ್ವಚ್ಛಗೊಳಿಸುವಂತೆ ಈಗಾಗಲೇ ಗ್ರಾಮಸ್ಥರು ಅರಣ್ಯಾಧಿಕಾರಿಗಳ ಬಳಿ ಹಲವು ಬಾರಿ ಮನವಿ ಮಾಡಿದ್ದರೂ ಸಹ ಅವರು ನಿರ್ಲಕ್ಷ್ಯವಹಿಸಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕೂಡಲೇ ಚಿರತೆ ಸೆರೆ ಹಿಡಿದು ಮರಣಹೊಂದಿದ ಕುರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.



