ಯಾವುದೇ ಸೂಕ್ತ ಪರವಾನಿಗೆ ಪಡೆಯದೇ ಕಾನೂನುಬಾಹಿರವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕೇಪುವಿನಲ್ಲಿ ಕೋಳಿ ಅಂಕ ಆಯೋಜಿಸಿದ ವಿಚಾರಕ್ಕೆ ಸಂಬಂಧಿಸಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸಹಿತ 16 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ನಿನ್ನೆ ಬಂಟ್ವಾಳ ಕೇಪು ಗ್ರಾಮದ ಕೇಪು ಎಂಬಲ್ಲಿ, ಮುರಳೀಧರ ರೈ ಎಂಬವರ ಗದ್ದೆಯಲ್ಲಿ, ಕಾನೂನುಬಾಹಿರವಾಗಿ ಕೋಳಿ ಅಂಕ ಆಡುವ ಬಗ್ಗೆ ಮಾಹಿತಿ ಬಂದ ಮೇರೆಗೆ ವಿಟ್ಲ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾರೆ. ಆಗ ಹಲವು ಜನರು ಕೋಳಿ ಅಂಕಕ್ಕೆ ಬಳಸುವ ಕೋಳಿಗಳನ್ನು ಹಿಡಿದುಕೊಂಡು ಗುಂಪು ಸೇರಿರುವುದು ಕಂಡುಬಂದಿದ್ದು, ಅಲ್ಲಿ ಸೇರಿದ್ದ ಜನರಿಗೆ ಕಾನೂನುಬಾಹಿರ ಕೋಳಿ ಅಂಕದ ಬಗ್ಗೆ ಸೂಕ್ತ ಕಾನೂನು ತಿಳುವಳಿಕೆ ನೀಡಲಾಗಿತ್ತು. ಆದ್ರೆ ಇದೇ ವೇಳೆ ಈ ಸ್ಥಳದಲ್ಲಿ ಹಾಜರಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ, ಸ್ಥಳದಲ್ಲಿ ಸೇರಿದ್ದ ಜನರಿಗೆ ಕಾನೂನು ಬಾಹಿರವಾದ ಕೋಳಿ ಅಂಕವನ್ನು ಮುಂದುವರಿಸುವಂತೆ ಪ್ರಚೋದನೆ ಮತ್ತು ದುಷ್ಪ್ರೇರಣೆಯನ್ನು ನೀಡಿದ್ದಾರೆ. ಹೀಗಾಗಿ ಸ್ಥಳದಲ್ಲಿ ಸೇರಿದ್ದ ಜನರು ಕಾನೂನು ಬಾಹಿರವಾಗಿ ಕೋಳಿ ಅಂಕ ಆಟವನ್ನು ಪ್ರಾರಂಭಿಸಿದ್ದಾರೆ. ಈ ವೇಳೆ ವಿಟ್ಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರು ಅಗತ್ಯ ಪೊಲೀಸ್ ಭದ್ರತೆಯನ್ನು ಏರ್ಪಡಿಸಿ ಕಾನೂನು ಬಾಹಿರವಾಗಿ ಕೋಳಿ ಅಂಕ ಆಟ ಆಡುತ್ತಿದ್ದ 16 ಜನರನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ 22 ಹುಂಜ ಕೋಳಿಗಳನ್ನು ಹಾಗೂ ಕೋಳಿ ಅಂಕಕ್ಕೆ ಬಳಸುವ ಬಾಳು (ಕತ್ತಿಗಳನ್ನು) ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮರಳೀಧರ ರೈ ಎಂಬವರು ತಮ್ಮ ಜಾಗದಲ್ಲಿ ಯಾವುದೇ ಸೂಕ್ತ ಪರವಾನಿಗೆ ಪಡೆಯದೇ, ಕಾನೂನು ಬಾಹಿರ ಕೃತ್ಯಕ್ಕೆ ಅನುವು ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ, ಕಾನೂನು ಬಾಹಿರ ಕೃತ್ಯವನ್ನು ನಡೆಸಲು ಪ್ರಚೋದನೆ ಮತ್ತು ದುಷ್ಪ್ರೇರಣೆಯನ್ನು ನೀಡಿದ ಹಿನ್ನೆಲೆಯಲ್ಲಿ ಪುತ್ತೂರು ವಿಧಾನಸಭಾ ಶಾಸಕರ ವಿರುದ್ಧ ಹಾಗೂ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದ 16 ಜನರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 190/2025, ಕಲಂ:189(2),49, 221,223,190)BNS-2023, PREVENTION OF CRUELTY TO ANIMALS ACT, 1960 (U/s-3,11) ರಂತೆ ಪ್ರಕರಣ ದಾಖಲಾಗಿದೆ.



