ಚಿತ್ರದುರ್ಗ: ಕೌಟುಂಬಿಕ ಕಲಹ ಹಿನ್ನೆಲೆ 2 ತಿಂಗಳ ಗರ್ಭಿಣಿ ನೇಣಿಗೆ ಶರಣಾಗಿರುವ ಘಟನೆ ಚಿತ್ರದುರ್ಗ ತಾಲೂಕಿನ ಕಾಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪುಷ್ಪ (25) ಮೃತ ಮಹಿಳೆ. ಕಾಟಿಹಳ್ಳಿ ಗ್ರಾಮದ ಹರೀಶ್ ನಗರದ ಖಾಸಗಿ ಗಾರ್ಮೆಂಟ್ಸ್ ಕಾರ್ಮಿಕನಾಗಿದ್ದ. ಈ ವೇಳೆ ಈ ಗಾರ್ಮೆಂಟ್ಸ್‌ಗೆ ತೆರಳ್ತಿದ್ದ ಪುಷ್ಪ ಹಾಗೂ ಹರೀಶ್ ಮಧ್ಯೆ ಪ್ರೇಮಾಂಕುರವಾಗಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಆದ್ರೆ ಅನ್ಯಜಾತಿ ಎಂಬ ಕಾರಣಕ್ಕೆ ಹರೀಶ್ ಹಾಗೂ ಪುಷ್ಪ ಪೋಷಕರ ಮಧ್ಯೆ ತಾರತಮ್ಯ ಭಾವವಿದ್ದು, ಹರೀಶ್ ಮನೆಗೆ ಪುಷ್ಪ ಪೋಷಕರಿಗೆ ಎಂಟ್ರಿ ಇರಲಿಲ್ಲ. ಆದರೂ ಎದೆಗುಂದದೇ ಪತಿಯೇ ಪರದೈವ ಎಂದು ನಂಬಿ ಸತತ ಎರಡು ವರ್ಷಗಳಿಂದ ಅನ್ಯೋನ್ಯವಾಗಿದ್ದ ಪುಷ್ಪ ಹಾಗೂ ಹರೀಶ್‌ಗೆ ಒಂದೂವರೆ ವರ್ಷದ ಒಂದು ಮದ್ದಾದ ಗಂಡು ಮಗುವಿದೆ.
ಈ ಮದ್ಯೆ, ಸಣ್ಣಪುಟ್ಟ ವಿಚಾರಕ್ಕೆ ಪದೇ ಪದೇ ಕೌಟಂಬಿಕ ಕಲಹ ಶುರುವಾಗಿದ್ದು, ಪರಸ್ಪರ ವಿಚ್ಛೇದನ ಪಡೆಯುವ ಮಟ್ಟಕ್ಕೆ ತಿರುಗಿತ್ತು. ಹೀಗಾಗಿ ಕಳೆದ ಎರಡು ದಿನಗಳ ಹಿಂದೆಯಷ್ಟೇ ದಂಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆಗ ರಾಜಿಸಂಧಾನದೊಂದಿಗೆ ಮನೆಗೆ ತೆರಳಿದ್ದ ಪುಷ್ಪ ನೇಣಿಗೆ ಶರಣಾಗಿದ್ದಾಳೆ. ಈ ವೇಳೆ ಮನೆಯಲ್ಲಿದ್ದ ಪತಿ ಹರೀಶ್ ಅಸ್ವಸ್ಥಳಾಗಿದ್ದ ಪತ್ನಿಯನ್ನು ಆಸ್ಪತ್ರೆಗೆ ಸೇರಿಸುವ ಮಾರ್ಗಮಧ್ಯೆ ಪುಷ್ಪ ಕೊನೆಯುಸಿರೆಳೆದಿದ್ದಾಳೆ. ಈವಿಷಯ ತಿಳಿದು ಆಸ್ಪತ್ರೆಗೆ ದೌಡಾಯಿಸಿದ ಪುಷ್ಪ ಪೋಷಕರು ಹಾಗೂ ಸಂಬಂಧಿಗಳು, ಹರೀಶ್ ವಿರುದ್ಧ ಕೆಂಡಕಾರಿದ್ದಾರೆ. ಕುಟುಂಬದಲ್ಲಿನ ಕೀಳರಿಮೆ ನಮ್ಮ ಮಗಳನ್ನು ಬಲಿ ಪಡೆದಿದೆ. ಅದನ್ನು ಮರೆಮಾಚಲು ಪುಷ್ಪಳನ್ನು ಕೊಲೆಗೈದಿದ್ದಾನೆ.ನಮ್ಮ ಹುಡುಗಿ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಸಣ್ಣತನದ ಬುದ್ಧಿಯವಳಲ್ಲ. ಹರೀಶನೇ ಈ ಕೃತ್ಯವೆಸಗಿ ಇದು ಸೂಸೈಡ್ ಎಂದು ಬಿಂಬಿಸಿದ್ದಾನೆಂದು ಆರೋಪಿಸಿದ್ದಾರೆ.
ಇನ್ನು ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತಿ ಹರೀಶ್ ಎಸ್ಕೇಪ್ ಆಗಿದ್ದಾನೆ. ಅಲ್ಲದೇ ಈ ಪ್ರಕರಣದ ಹಿಂದೆ ಮತ್ತೋರ್ವ ಮಹಿಳೆಯೊಂದಿಗಿನ ಅಕ್ರಮಸಂಬಂಧ ಸಹ ಕುಟುಂಬದಲ್ಲಿ ದೊಡ್ಡ ಕಲಹ ಸೃಷ್ಟಿಸಿದೆ. ಹೀಗಾಗಿ ಈ ಮಹಿಳೆಯ ಸಾವೆಂಬ ಶಂಕೆಯಿದ್ದು, ಪೊಲೀಸರು ಗರ್ಭಿಣಿ ಸಾವಿಗೆ ನ್ಯಾಯ ಒದಗಿಸುವಂತೆ ಪುಷ್ಪ ಸಂಬಂಧಿಗಳು ಆಗ್ರಹಿಸಿದ್ದಾರೆ. ಹೀಗಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.



