ಮಡಿಕೇರಿ : ಕಾಡಿನಲ್ಲಿರುವ ಅಪಾರ ಬೆಲೆ ಬಾಳುವ ಮರಗಳ ರಕ್ಷಣೆ ಕೆಲಸ ಮಾಡಬೇಕಿದ್ದ ಸಿಬ್ಬಂದಿಯೇ ಅವುಗಳ ಮಾರಣ ಹೋಮ ಮಾಡಿ ಕಳ್ಳತನ ನಡೆಸುತ್ತಿದ್ದ ಎಂಬ ಆಘಾತಕಾರಿ ವಿಷಯ ಇಲಾಖೆ ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ. ಮರಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಹಿಡಿಯಲು ಹೋದ ಅರಣ್ಯ ಇಲಾಖೆಯ ಸಿಬ್ಬಂದಿಯೇ ಘಟನೆಯಿಂದಾಗಿ ಶಾಕ್ ಆಗಿದ್ದಾರೆ.
ಮರಗಳ್ಳತನದ ಉದ್ದೇಶದಿಂದ ಗ್ಯಾಂಗೊಂದು ಸೋಮವಾರಪೇಟೆ ತಾಲೂಕಿನ ಕಾಜೂನು ಬಳಿ ಮೀಸಲು ಅರಣ್ಯದಲ್ಲಿ 7 ತೇಗದ ಮರ ಕಡಿದು ಉರುಳಿಸಿರೋದು ಗಸ್ತು ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿ ಗಮನಕ್ಕೆ ಬಂದಿತ್ತು. ಹೀಗಾಗಿ ಆರೋಪಿಗಳ ಸೆರೆಗೆ ಸಿಬ್ಬಂದಿ 4 ದಿನಗಳ ಕಾಲ ಕಾದು ಕುಳಿತಿದ್ದರು. ಡಿಸೆಂಬರ್ 12ರಂದು ಮಧ್ಯರಾತ್ರಿ ಮರಗಳ್ಳರು ಅರಣ್ಯಕ್ಕೆ ಎಂಟ್ರಿಕೊಟ್ಟಿದ್ದು, ಮರಗಳ್ಳರನ್ನು ಹಿಡಿಯುವ ಸಂದರ್ಭದಲ್ಲಿ ಘರ್ಷಣೆಯಾಗಿತ್ತು. ಈ ವೇಳೆ ಅಧಿಕಾರಿ ಚಂದ್ರಶೇಖರ್ ಗಾಳಿಯಲ್ಲಿ 2 ಸುತ್ತು ಗುಂಡುಹಾರಿಸಿದ್ದರು. ಘಟನೆಯಲ್ಲಿ ಲೋಡರ್ ಸಂತೋಷ್ನನ್ನು ಸಿಬ್ಬಂದಿ ಬಂಧಿಸಿದ್ದರೆ, ಉಳಿದ ನಾಲ್ವರು ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಎಡವಾರೆ ಮೀಸಲು ಅರಣ್ಯದಲ್ಲಿ ಒಟ್ಟು 25 ತೇಗದ ಮರಗಳು ಕಳವಾಗಿದೆ ಎನ್ನಲಾಗಿದೆ. ಕತ್ತರಿಸಿದ್ದ 7 ತೇಗದ ಮರಗಳ ಜೊತೆ ಪಿಕ್ಅಪ್ ವಾಹನ ವಶಕ್ಕೆ ಪಡೆಯಲಾಗಿದೆ.
ಬಂಧಿತ ಸಂತೋಷ್ ವಿಚಾರಣೆ ವೇಳೆ ಮರಗಳ್ಳರಿಗೆ ಸಹಕಾರ ನೀಡುತ್ತಿದ್ದ ಆರ್ಆರ್ಟಿ ಸಿಬ್ಬಂದಿ ವಿನೋದ್ ಪಾತ್ರ ಬಯಲಾಗಿದೆ. ಅರಣ್ಯದ ಬಳಿ ಬೈಕ್ನಲ್ಲಿ ಓಡಾಡಿ ಈತ ಮಾಹಿತಿ ನೀಡುತ್ತಿದ್ದ ಎನ್ನಲಾಗಿದ್ದು, ಮರಗಳ್ಳತನ ಬಹಿರಂಗವಾಗ್ತಿದ್ದಂತೆ ವಿನೋದ್ ತಲೆಮರೆಸಿಕೊಂಡಿದ್ದಾನೆ. ಘಟನೆ ಸಂಬಂಧ ಆರ್ಆರ್ಟಿ ಸಿಬ್ಬಂದಿ ವಿನೋದ್ ಸೇರಿದಂತೆ 6 ಜನರ ವಿರುದ್ಧ FIR ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ.



