ಗುಂಡ್ಲುಪೇಟೆ: ವಿದ್ಯಾರ್ಥಿಗಳು ನಿರಂತರವಾಗಿ ಅಭ್ಯಾಸ ಮಾಡಿದರೆ ಮಾತ್ರ ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು, ಸಾಧನೆ ಗಳಿಸಲು ಸಾಧ್ಯ ಎಂದು ಶಾಸಕ ಎಚ್.ಎಂ.ಗಣೇಶಪ್ರಸಾದ್ ತಿಳಿಸಿದರು.
ಪಟ್ಟಣದ ಗುರು ಭವನದಲ್ಲಿ ತಾಲೂಕಿನ ಎಲ್ಲಾ ಪ್ರೌಢಶಾಲಾ 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ‘ಸ್ಪೂರ್ತಿ ಸಿಂಚನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯೆಗಿಂತ ಮೀಗಲಾದದ್ದು ಯಾವುದು ಇಲ್ಲ. ಜ್ಞಾನದ ಹಸಿವು ಹೆಚ್ಚಾದಾಗ ಮಾತ್ರ ಏನನ್ನು ಬೇಕಾದರು ಸಾಧಿಸಬಹುದು ಎಂದು ಹೇಳಿದರು.
ಭವಿಷ್ಯದ ಉತ್ತಮ ಪ್ರಜೆಗಳಾದ ತಾವು ಇಂದಿನಿಂದಲೇ ಉತ್ತಮ ಅಭ್ಯಾಸ ಮಾಡಿ, ಜೀವನವನ್ನು ಉತ್ತಮ ಪಡಿಸಿಕೊಳ್ಳಬೇಕು. ತಾಲೂಕಿನಲ್ಲಿ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಅಗತ್ಯವಿರುವ ಎಲ್ಲಾ ರೀತಿಯ ಸೌಲಭ್ಯವನ್ನು ಕಲ್ಪಿಸಲು ಶಕ್ತಿ ಮೀರಿ ಶ್ರಮಿಸುವುದಾಗಿ ತಿಳಿಸಿ, ಇದಕ್ಕೆ ಎಲ್ಲರು ಸಹಕಾರ ನೀಡಬೇಕು ಎಂದು ಕೋರಿದರು.
ಆಧ್ಯಾತ್ಮಿಕ ಚಿಂತಕ ಶಂಕರ ದೇವನೂರು ಮಾತನಾಡಿ, ಸಾಮಾನ್ಯರಾಗಿ ಹುಟ್ಟಿ ಅತ್ಯುತ್ತಮ ಸಾಧನೆಯ್ನು ಹಲವು ಮಂದಿ ಮಹಾನ್ ನಾಯಕರು ಮಾಡಿದ್ದಾರೆ. ಅವರು ಸಾಧನೆಗಾಗಿ ಏನೆಲ್ಲಾ ಕಷ್ಟಪಟ್ಟರು, ಹೇಗೆ ಗುರಿ ತಲುಪಿದರು ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕಳೆದ ಸಾಲಿನ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶೇಖರ್, ಬಿಆರ್‍ಸಿ ಡಾ.ಸರೋಜಾ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಂಜಣ್ಣ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಗುರುಪ್ರಸಾದ್, ಭೀಮನಬೀಡು ಪ್ರೌಢಶಾಲೆಯ ಸಹ ಶಿಕ್ಷಕರಾದ ನಂದೀಶ್ ಸೇರಿದಂತೆ ತಾಲೂಕಿನ ವಿವಿಧ ಪ್ರೌಢಶಾಲೆಗಳ 500ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಿದ್ದರು.