ಗುಂಡ್ಲುಪೇಟೆ: ಗ್ರಾಹಕರಿಂದ ದೂರು ಬಂದ ತಕ್ಷಣಕ್ಕೆ ಸ್ಪಂದಿಸಬೇಕು ಎಂದು ಸೆಸ್ಕ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಶಾಸಕ ಎಚ್.ಎಂ.ಗಣೇಶ್‍ಪ್ರಸಾದ್ ಕಿವಿಮಾತು ಹೇಳಿದರು.
ಪಟ್ಟಣದ ಖಾಸಗೀ ಹೋಟೆಲ್‍ನಲ್ಲಿ ನಡೆದ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ತಾಲೂಕು ಸಂಘದ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವಿದ್ಯುತ್ ಗುತ್ತಿಗೆದಾರರು ತಾಲೂಕಿನಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡುತಿದ್ದು, ರೈತರಿಗೆ ಅನುಕೂಲ ಆಗುತ್ತಿದೆ. ಇದು ಈಗೆ ಮುಂದುವರೆಯಬೇಕು ಎಂದು ಸಲಹೆ ನೀಡಿದರು.
ತಾಲೂಕಿನಲ್ಲಿ ಭವಿಷ್ಯದಲ್ಲಿ ವಿದ್ಯುತ್ ಅಭಾವ ಸೃಷ್ಟಿಯಾಗುವ ಸಾಧ್ಯತೆ ಬಗ್ಗೆ ತಿಳಿದಿದೆ. ಈ ಹಿನ್ನೆಲೆಯಲ್ಲಿ ಅಭಾವ ನೀಗಿಸಲು ಕ್ರಮ ವಹಿಸುವುದಾಗಿ ಇಂಧನ ಸಚಿವ ಕೆ.ಜೆ.ಜಾರ್ಜ್ ಭರವಸೆ ನೀಡಿದ್ದಾರೆ. ಅಲ್ಲದೇ ತಾಲೂಕಿನಲ್ಲಿ ಇಲಾಖೆಯಿಂದ ಆಗಬೇಕಾದ ಕೆಲಸಗಳ ಬಗ್ಗೆ ಮಾಹಿತಿ ನೀಡುವಂತೆ ಈಚೆಗೆ ತಿಳಿಸಿದ್ದಾರೆ. ಹಿಂದೆ ಇಂಧನ ಸಚಿವರಾಗಿದ್ದು ಇಲಾಖೆಯ ಬಗ್ಗೆ ಆಳವಾದ ಅನುಭವ ಹೊಂದಿರುವ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರಲ್ಲೂ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೀಗಾಗಿ ಇಲಾಖೆ ಅಧಿಕಾರಿಗಳು ಮತ್ತು ವಿದ್ಯುತ್ ಗುತ್ತಿಗೆದಾರರು ಏನೇ ಸಮಸ್ಯೆಗಳಿದ್ದರೂ ಹೇಳಿಕೊಳ್ಳಿ. ನಾನು ಸಂಬಂಧಪಟ್ಟವರ ಗಮನಕ್ಕೆ ತಂದು ಆದ್ಯತೆಯಲ್ಲಿ ಕ್ರಮ ವಹಿಸುವಂತೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ಸೆಸ್ಕ್ ಎಇಇ ಕೆ.ಎಂ.ಸಿದ್ದಲಿಂಗಪ್ಪ ಮಾತನಾಡಿ, ತಾಂತ್ರಿಕ ಕಾರಣ ಒಮ್ಮೆಗೆ ಮಾಡಿಕೊಡಲು ಸಾಧ್ಯವಿಲ್ಲ ಎಂದು ತಾಲೂಕಿಗೆ ಮೂರು ಸ್ಟೇಷನ್ ಮಂಜೂರಾಗಿದೆ. ಪ್ರಸ್ತಾವನೆಯಂತೆ ಮಣಗಹಳ್ಳಿ ಸ್ಟೇಷನ್ ಮಾಡಿಸಿಕೊಡಿ. ವಿದ್ಯುತ್ ಸಮಸ್ಯೆಗಳ ನಿವಾರಣೆಗೆ ಪ್ರತಿಭಾರಿ ಪೂರೈಕೆ ಸ್ಥಗಿತ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗುವ ಕಾರಣ ಗುಂಡ್ಲುಪೇಟೆ ಪ್ರತ್ಯೇಕಿಸಲು ಅವಕಾಶ ಮಾಡುವಂತೆ ಮನವಿ ಮಾಡಿದರು. ಗುಂಡ್ಲುಪೇಟೆಯ 5 ಮತ್ತು ಬೇಗೂರಿನ 2 ಶಾಖೆಗಳಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ಮಾಹಿತಿ ನೀಡಿದರು. ಹಂಗಳ, ಮಾಡ್ರಹಳ್ಳಿ ಶಾಖೆಗೆ ನಿವೇಶನ ಕೊಡಿಸುವಂತೆ ಮನವಿ ಮಾಡಿದರು.
ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್, ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಜಿ.ಎಂ.ಸುರೇಶ್, ತಾಲೂಕು ಅಧ್ಯಕ್ಷ ಗೋಪಾಲಪ್ಪ(ಗೋಪಿ), ಸೆಸ್ಕ್ ಬೇಗೂರು ಉಪವಿಭಾಗದ ಎಇಇ ರಾಮಚಂದ್ರು, ವಿದ್ಯುತ್ ಗುತ್ತಿಗೆದಾರರ ರಾಜ್ಯ ಸಂಘದ ಪ್ರತಿನಿಧಿ ಪುಟ್ಟಸ್ವಾಮಚಾರ್, ರಾಜ್ಯ ಸಹಕಾರ ಸಂಘದ ನಿರ್ದೇಶಕ ಹೊನ್ನಪ್ಪ, ವಿದ್ಯುತ್ ಗುತ್ತಿಗೆದಾರರ ಸಂಘದ ಮಾಜಿ ತಾಲೂಕು ಅಧ್ಯಕ್ಷ ಡಿ.ಎಸ್.ಪ್ರಸಾದ್, ಉತ್ತಂಗೆರೆಹುಮಡಿ ಶಿವಮೂರ್ತಿ ಸೇರಿದಂತೆ ಇತರರು ಹಾಜರಿದ್ದರು.