Thursday, December 25, 2025
Google search engine

Homeರಾಜಕೀಯ'ರಾಹುಲ್‌ ಹಠಾವೋ, ಪ್ರಿಯಾಂಕಾ ಬಿಠಾವೋ' : ರಾಹುಲ್‌ V/S ಪ್ರಿಯಾಂಕಾ ಪರ್ವ..!

‘ರಾಹುಲ್‌ ಹಠಾವೋ, ಪ್ರಿಯಾಂಕಾ ಬಿಠಾವೋ’ : ರಾಹುಲ್‌ V/S ಪ್ರಿಯಾಂಕಾ ಪರ್ವ..!

ಬೆಂಗಳೂರು: ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಎದುರಿಸಿದ ಸಾಲುಸಾಲು ಚುನಾವಣಾ ಸೋಲುಗಳಿಂದ ಕಾಂಗ್ರೆಸ್‌ನ ಬಹುತೇಕ ಶಾಸಕರು, ಸಂಸದರು ಹತಾಶರಾಗಿದ್ದಾರೆ. ಇನ್ನೂ ಅವರಿಗೆ ಪರ್ಯಾಯ ನಾಯಕತ್ವವು ರಾಹುಲ್‌ ಸೋದರಿ ಪ್ರಿಯಾಂಕಾ ವಾದ್ರಾ ಅವರಲ್ಲಿ ಗೋಚರವಾಗುತ್ತಿದ್ದು, ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಪಾಳಯದಲ್ಲೇ ರಾಹುಲ್‌ ಹಠಾವೋ, ಪ್ರಿಯಾಂಕಾ ಬಿಠಾವೋ ಎಂಬ ಸದ್ದು ನಿಧಾನವಾಗಿ ಕೇಳಿಬರುತ್ತಿದೆ ಎನ್ನಲಾಗುತ್ತಿದೆ.

ಈ ನಡುವೆ ಮಹಾರಾಷ್ಟ್ರ, ಹರಿಯಾಣ, ದಿಲ್ಲಿಯ ಕಾಂಗ್ರೆಸ್‌ ನಾಯಕರು ಬಹಿರಂಗವಾಗಿಯೇ ಎಐಸಿಸಿ ಅಧ್ಯಕ್ಷೆಯಾಗಿ ಪ್ರಿಯಾಂಕಾ ವಾದ್ರಾ ಅವರನ್ನು ಆಯ್ಕೆ ಮಾಡಲು ಹೈಕಮಾಂಡ್‌ ಮೇಲೆ ಒತ್ತಡ ಹೇರುವ ಪ್ರಕ್ರಿಯೆ ಶುರುವಾಗಿದೆ.

ಈ ಬೆಳವಣಿಗೆ ಮುಖ್ಯವಾಹಿನಿಯ ಚರ್ಚೆಗೆ ಬರಲು ಕಾರಣ ಒಡಿಶಾದ ಹಿರಿಯ ಕಾಂಗ್ರೆಸ್‌ ಶಾಸಕ ಮೊಹಮ್ಮದ್‌ ಮೊಕ್ವಿಮ್‌ ಅವರು ಇತ್ತೀಚೆಗೆ ಸೋನಿಯಾ ಗಾಂಧಿ ಅವರಿಗೆ ಬರೆದಿರುವ ಪತ್ರವಾಗಿದ್ದು, ಅದರಲ್ಲಿ ಮೊಕ್ವಿಮ್‌, ಒಬ್ಬ ಕಾಂಗ್ರೆಸ್‌ ಶಾಸಕನಾಗಿ ನನಗೆ ಕಳೆದ 3 ವರ್ಷಗಳಿಂದ ಹಲವು ಬಾರಿ ಯತ್ನಿಸಿದರೂ ಕೂಡ ರಾಹುಲ್‌ ಗಾಂಧಿ ಅವರ ಭೇಟಿ ಸಾಧ್ಯವಾಗಿಲ್ಲ. ರಾಹುಲ್‌ ನಾಯಕತ್ವದಲ್ಲಿ ಅಸಮರ್ಥತೆ ಎದ್ದು ಕಾಣುತ್ತಿದ್ದು, ಪಕ್ಷದ ಸಂಘಟನೆ ಹಾಗೂ ನಾಯಕತ್ವಕ್ಕೆ ಇನ್ನು ಪ್ರಿಯಾಂಕಾ ಪ್ರವೇಶಿಸಲು ಇದು ಸಕಾಲ ಎಂದಿದ್ದಾರೆ. ಇದಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಗರಂ ಆಗಿ ಶಾಸಕನ ವಿರುದ್ಧ ಕ್ರಮ ಜರುಗಿಸಿದರೂ ಕೂಡ ಪ್ರಿಯಾಂಕಾಗೆ ಪಟ್ಟ ಕಟ್ಟಿ ಎಂಬ ಧ್ವನಿಯನ್ನು ಅಡಗಿಸಲಾಗಲಿಲ್ಲ ಎಂದು ಬರೆದಿದ್ದಾರೆ.

ಈ ವೇಳೆ ಉತ್ತರಪ್ರದೇಶದ ಸಹರಣಪುರ ಸಂಸದ ಇಮ್ರಾನ್‌ ಮಸೂದ್‌ ಅವರು ಕೂಡ ಮೊಕ್ವಿಮ್‌ ಅವರ ಅಭಿಪ್ರಾಯವನ್ನೇ ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದು, ಪ್ರಭಾವಿ ಪ್ರಧಾನಿ ಇಂದಿರಾ ಗಾಂಧಿ ಅವರ ಮಾದರಿಯಲ್ಲೇ ವಯನಾಡ್‌ ಸಂಸದೆ ಪ್ರಿಯಾಂಕಾ ಕೂಡ ಪ್ರಧಾನಿ ಆಗಲು ಸಮರ್ಥರು ಎಂದು ಹೇಳಿಕೆ ನೀಡಿದ್ದರು. ಇನ್ನೂ ಮಸೂದ್‌ ಅವರು ಪ್ರಿಯಾಂಕಾ ಅವರ ಆಪ್ತ ವಲಯದಲ್ಲಿದ್ದರೂ ಕೂಡ ಅವರು ಪ್ರಿಯಾಂಕಾ ವಾದ್ರಾಗೆ ಪಕ್ಷದ ನಾಯಕತ್ವ ನೀಡುವ ವಿಷಯ ಪ್ರಸ್ತಾಪಿಸಲು ಪ್ರಮುಖ ಸಂದರ್ಭವೊಂದನ್ನು ವಿಶ್ಲೇಷಿಸಿದ್ದಾರೆ.

ಅಜ್ಜಿಯಂತೆಯೇ ಮೊಮ್ಮಗಳು ಸದ್ಯದ ಪರಿಸ್ಥಿತಿಯಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶಕ್ಕೆ ತಕ್ಕ ತಿರುಗೇಟು ನೀಡಬೇಕೆಂದರೆ ಪ್ರಿಯಾಂಕಾ ವಾದ್ರಾ ಅವರನ್ನು ಪ್ರಧಾನಿಯಾಗಿಸಬೇಕು. ಅವರು ಇಂದಿರಾ ಗಾಂಧಿ ಅವರ ಮೊಮ್ಮಗಳು ಎನ್ನುವುದನ್ನು ಮರೆಯದಿರಿ. ಪಾಕಿಸ್ತಾನಕ್ಕೆ ಮರೆಯದಂತಹ ಹೊಡೆತ ಕೊಟ್ಟಿದ್ದ ಇಂದಿರಾ ಗಾಂಧಿ ಅವರಂತೆಯೇ ಪ್ರಿಯಾಂಕಾ ಕೂಡ ತಿರುಗೇಟು ನೀಡಲಿದ್ದಾರೆ, ಎಂದು ನೆರೆ ರಾಷ್ಟ್ರಗಳ ಕ್ಯಾತೆ ವಿಚಾರದಲ್ಲಿ ಕೇಂದ್ರ ಸರಕಾರಕ್ಕೂ ತಿರುಗೇಟು ನೀಡಿದ್ದಾರೆ.

ಇನ್ನೂ ಆಪರೇಷನ್‌ ಸಿಂದೂರದ ಬಗ್ಗೆ ಪಾಕಿಸ್ತಾನವು ಪದೇ ಪದೇ ಸುಳ್ಳು ಹೇಳುತ್ತಿದ್ದರೂ ಕೇಂದ್ರ ಸರಕಾರವು ತಕ್ಕ ಪ್ರತ್ಯುತ್ತರ ನೀಡುತ್ತಿಲ್ಲ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ತಡೆಗೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎನ್ನುವುದು ಮಸೂದ್‌ ಹೇಳಿಕೆಯಲ್ಲಿ ಮೇಲ್ನೋಟಕ್ಕೆ ಕಂಡುಬರುತ್ತದೆಯಾದರೆ, ಒಳಾರ್ಥದಲ್ಲಿ ಮಸೂದ್‌ ಕುಟುಕಿದ್ದು ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿರುವ ರಾಹುಲ್‌ ಗಾಂಧಿ ಅವರನ್ನೇ ಎನ್ನುವುದು ಇಲ್ಲಿ ಗಮನಾರ್ಹ.

ಈ ಮೇಲಿನ ವಿಷಯಗಳನ್ನು ಪ್ರಸ್ತಾಪಿಸದೆಯೇ ತಮ್ಮ ಹಳೆಯ ಮತಚೋರಿ ಆರೋಪಕ್ಕೆ ನೇತುಬಿದ್ದಿದ್ದು ರಾಹುಲ್‌ ನಾಯಕತ್ವದ ವೈಫಲ್ಯಕ್ಕೆ ಹಿಡಿದ ಕನ್ನಡಿ ಎಂಬ ಸಂದೇಶವನ್ನು ಮಸೂದ್‌ ಕಾಂಗ್ರೆಸ್‌ ಪಾಳಯದಲ್ಲೇ ರವಾನಿಸಿದ್ದು ಗಮನಾರ್ಹವಾಗಿದೆ. ಅಲ್ಲದೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರೊಂದಿಗೆ ಚಹಾ ಸೇವಿಸಿ, ಕೇರಳದ ಆರು ಪ್ರಮುಖ ಯೋಜನೆಗಳ ಕಡೆಗೆ ಗಮನ ಸೆಳೆದ ಪ್ರಿಯಾಂಕಾ ಗಾಂಧಿ ಅವರು ವಂದೇ ಮಾತರಂ ಬಗೆಗಿನ ಚರ್ಚೆ ವೇಳೆಯೂ ತಮ್ಮ ವಿಶಿಷ್ಟ ವಾಗ್ದಾಳಿ ಮೂಲಕ ಪ್ರತಿಪಕ್ಷಗಳ ನಾಯಕರ ಮನಗೆದ್ದರು ಎನ್ನುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅಭಿಪ್ರಾಯವಾಗಿದೆ.

RELATED ARTICLES
- Advertisment -
Google search engine

Most Popular