ಚಿತ್ರದುರ್ಗ : “ಹೆತ್ತವರಿಗೆ ಹೆಗ್ಗಣ ಮುದ್ದು” ಎಂಬ ಮಾತಿದೆ. ಆದರೆ ಇಲ್ಲೊಬ್ಬಳು ತಾಯಿ ತನ್ನ ಸುಖಕ್ಕಾಗಿ, ತಾನು ಹೆತ್ತ ಎರಡು ವರ್ಷದ ಕಂದಮ್ಮನನ್ನೇ ಬಿಕರಿ ಮಾಡಿರುವ ಅಮಾನವೀಯ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ನಡೆದಿದೆ.
ಹಿರಿಯೂರಿನ ನಿವಾಸಿ ಐಶ್ವರ್ಯ ಎಂಬಾಕೆ ಹೂವಿನಹೊಳೆ ಗ್ರಾಮದ ಚಂದ್ರಪ್ಪ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಇವರ ಈ ಅಕ್ರಮ ವ್ಯವಹಾರಕ್ಕೆ ಎರಡು ವರ್ಷದ ಮಗು ಅಡ್ಡಿಯಾಗುತ್ತಿದೆ ಎಂಬ ಕಾರಣಕ್ಕೆ, ಇಬ್ಬರೂ ಸೇರಿ ಕೇವಲ 50,000 ರೂಪಾಯಿಗೆ ಮಗುವನ್ನು ಕೊಪ್ಪಳ ಮೂಲದವರಿಗೆ ಮಾರಾಟ ಮಾಡಿದ್ದಾರೆ!
ಕಳೆದ ಕೆಲವು ದಿನಗಳಿಂದ ಮಗು ಕಾಣದಿದ್ದಾಗ ಅನುಮಾನಗೊಂಡ ಸ್ಥಳೀಯರು ತಕ್ಷಣ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದಾರೆ. ಅಧಿಕಾರಿ ಮಂಜುನಾಥ್ ಅವರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದಾಗ ಈ ಬೆಚ್ಚಿಬೀಳಿಸುವ ಸತ್ಯ ಹೊರಬಂದಿದೆ.
ಹಿರಿಯೂರು ನಗರ ಪೊಲೀಸರು ಆರೋಪಿ ತಾಯಿ ಐಶ್ವರ್ಯಳನ್ನು ವಶಕ್ಕೆ ಪಡೆದಿದ್ದಾರೆ. ತಲೆಮರೆಸಿಕೊಂಡಿರುವ ಪ್ರಿಯಕರ ಚಂದ್ರಪ್ಪನಿಗಾಗಿ ಹುಡುಕಾಟ ಮುಂದುವರಿದಿದೆ. ಮಗುವನ್ನು ಕೊಂಡುಕೊಂಡವರ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.
ಹಣ ಮತ್ತು ಕಾಮದ ಅಮಲಿನಲ್ಲಿ ಹೆತ್ತ ಮಗುವನ್ನೇ ಮಾರಾಟ ಮಾಡುವ ಇಂತಹ ಕೃತ್ಯ ಎಸಗಿದ ಇವರಿಗೆ ಕಠಿಣ ಶಿಕ್ಷೆಯಾಗಲಿ.



