ಮೈಸೂರು, (ಡಿ, 26): ಮೈಸೂರು ಅರಮನೆ ಮುಂಭಾಗದಲ್ಲಿ ಸಂಭವಿಸಿದ್ದ ಸ್ಫೋಟದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವನ್ನಪ್ಪಿದ್ದಾರೆ. ನಿನ್ನೆ(ಡಿಸೆಂಬರ್ 25) ಅರಮನೆ ಜಯಮಾರ್ತಂಡ ದ್ವಾರದ ಬಳಿ ಸಲೀಂ ಎಂಬಾತ ಬಲೂನ್ ಮಾರುತ್ತಿದ್ದ ಈ ವೇಳೆ ಸಿಲಿಂಡರ್ ಸ್ಪೋಟವಾಗಿತ್ತು. ಸ್ಫೋಟದ ತೀವ್ರತೆಗೆ ಉತ್ತರ ಪ್ರದೇಶ ಮೂಲದ 40 ವರ್ಷದ ಸಲೀಂ ಸ್ಥಳದಲ್ಲೇ ಮೃತಪಟ್ಟಿದ್ದರೆ, ಮೈಸೂರು ಜಿಲ್ಲೆಯ ನಂಜನಗೂಡು ಮೂಲದ ಮಂಜುಳಾ ಗಂಭೀರಾ ಗಾಯಗೊಂಡಿದ್ದರು. ಕೂಡಲೇ ಅವರನ್ನು K.R.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು (ಡಿಸೆಂಬರ್ 26) ಕೊನೆಯುಸಿರೆಳೆದಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ.
ನಿನ್ನೆ(ಡಿ, 25) ನಿನ್ನೆ ರಾತ್ರಿ 8.30ರ ಸುಮಾರಿಗೆ ಸ್ಪೋಟವಾಗಿತ್ತು. ಇನ್ನು ಘಟನೆಯಲ್ಲಿ ನಾಲ್ವರಿಗೆ ಗಾಯಗಳಾಗಿದೆ. ಬೆಂಗಳೂರು ಮೂಲದ ಲಕ್ಷ್ಮಿ ತಲೆಗೆ ಗಂಭೀರ ಗಾಯವಾಗಿದ್ದರೆ, ಕೊಲ್ಕತ್ತಾ ಮೂಲದ ಶಾಹಿನಾ ಶಬ್ಬಿರ್ ಕಾಲಿಗೆ ಗಾಯವಾಗಿದೆ. ಹಾಗೇ ರಾಣೆಬೆನ್ನೂರು ಮೂಲದ ಕೊಟ್ಟ್ರೇಶಿ ಕಾಲಿಗೆ ಗಾಯವಾಗಿದ್ದು, ಸದ್ಯ ಗಾಯಾಳುಗಳಿಗೆ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಪ್ರಕರಣದ ಸುತ್ತ ಅನುಮಾನದ ಹುತ್ತ
ಸ್ಫೋಟವಾದ ಕೂಡಲೇ ಸ್ಥಳಕ್ಕೆ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಡಿಸಿಪಿಗಳಾದ ಬಿಂದುಮಣಿ ಸುಂದರ್ ರಾಜ್ ಅಗ್ನಿಶಾಮಕದ ದಳದ ಸಿಬ್ಬಂದಿ ದೌಡಾಯಿಸಿ ಪರಿಶೀಲನೆ ನಡೆಸಿದ್ದರು. ಸ್ಪೋಟ ಪತ್ತೆ ದಳ ಶ್ವಾನದಳ ಸಹಾ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದು, ಇನ್ನು ಈ ಪ್ರಕರಣದಲ್ಲಿ ಹಲವು ಅನುಮಾನಗಳು ವ್ಯಕ್ತವಾಗಿವೆ. ಯಾಕಂದ್ರೆ ಮೃತ ಸಲೀಂ ಕಳೆದ 15 ದಿನ ಹಿಂದಷ್ಟೇ ಮೈಸೂರಿಗೆ ಬಲೂನ್ ಮಾರಲು ಬಂದಿದ್ದ. ಆದ್ರೆ, ಆತ ಮೈಸೂರಿನ ಲಾಡ್ಜ್ವೊಂದರಲ್ಲಿ ತಂಗಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.
ಓರ್ವ ಬಲೂನ್ ಮಾರುವವ ಕಳೆದ 15 ದಿನಗಳಿಂದ ಲಾಡ್ಜ್ ನಲ್ಲಿ ಇರುವಷ್ಟು ಆರ್ಥಿಕವಾಗಿ ಸಬಲನಾಗಿರುತ್ತಾನೆಯೇ ಎನ್ನುವ ಪ್ರಶ್ನೆ ಉದ್ಭವವಾಗುತ್ತೆ. ಬಲೂನ್ ಮಾರಾಟದಿಂದ ಹೊಟ್ಟೆ ತುಂಬಿದರೆ ಸಾಕು ಎನ್ನುತ್ತಾರೆ. ಇಂತದರಲ್ಲಿ ಈ ಸಲೀಂ ಲಾಡ್ಜ್ನಲ್ಲಿ ತಂಗಿ ಬಲೂನ್ ವ್ಯಾಪಾರ ಮಾಡುತ್ತಿದ್ದ ಎನ್ನುವುದರ ಹಿಂದೆ ಅನುಮಾನಗಳು ವ್ಯಕ್ತವಾಗಿವೆ. ಹೀಗಾಗಿ ಪೊಲೀಸರು ಮಾತ್ರವಲ್ಲದೇ ಎನ್ಐಎ ಸಹ ಈ ಕೇಸಿನಲ್ಲಿ ಪ್ರವೇಶ ಮಾಡಿದ್ದು, ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ನಡೆಸಿದೆ.



