ಚಿಕ್ಕಮಗಳೂರು: ಕಡೂರು ತಾಲೂಕಿನ ಬೀರೂರು ಸಮೀಪದ ಬಾಸೂರು ಕಾವಲಿನ ಕೃಷ್ಣಮೃಗಗಳ ಮೀಸಲು ಸಂರಕ್ಷಿತ ಪ್ರದೇಶದ ಪಕ್ಕದಲ್ಲೇ ನಡೆದ ಮೂರು ಕೃಷ್ಣಮೃಗಗಳ ಬೇಟೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ಡಿ.23ರಂದು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿ ಎರಡು ಹೆಣ್ಣು ಹಾಗೂ ಒಂದು ಗಂಡು ಕೃಷ್ಣಮೃಗಗಳನ್ನು ಬೇಟೆಯಾಡಲಾಗಿತ್ತು. ಹತ್ಯೆಗೀಡಾದ ಮೂರು ಕೃಷ್ಣಮೃಗಗಳು ಕೇವಲ ಎರಡು ವರ್ಷ ಪ್ರಾಯದವಾಗಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಏಳು ದಿನದೊಳಗೆ ಘಟನೆಯ ಸಂಪೂರ್ಣ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಈ ಪ್ರಕರಣದಲ್ಲಿ ಅಧಿಕಾರಿಗಳ ನಡೆ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು. ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿದ್ದವು. ಅಧಿಕಾರಿಗಳು ಘಟನೆ ನಡೆದ ದಿನ ಸಂಜೆ ಆರ್.ಎಫ್.ಓ. ಸ್ಥಳಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ನೀಡಿದ್ದರು. ಆದರೆ, ಅಂದೇ ಸಂಜೆ 4 ಗಂಟೆಯೊಳಗೆ ಮರಣೋತ್ತರ ಪರೀಕ್ಷೆ ನಡೆದಿರುವುದು ಶಂಕೆಗೆ ಕಾರಣವಾಗಿದೆ.
ಅಳಿವಿನಂಚಿನಲ್ಲಿರುವ ಹಾಗೂ ಕೇವಲ ಚಿಕ್ಕಮಗಳೂರು ಮತ್ತು ಹಾವೇರಿ ಜಿಲ್ಲೆಗಳಲ್ಲಿ ಮಾತ್ರ ಕಾಣಸಿಗುವ ಅಪರೂಪದ ಕೃಷ್ಣಮೃಗಗಳ ಹತ್ಯೆ ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹಂತಕರ ಪತ್ತೆಗೆ ತೀವ್ರ ಶೋಧ ನಡೆಸಲು ಸರ್ಕಾರ ಆದೇಶಿಸಿದೆ. ಘಟನೆಯ ಹಿಂದೆ ಯಾರೇ ಇದ್ದರೂ, ಎಷ್ಟೇ ದೊಡ್ಡ ವ್ಯಕ್ತಿ ಇದ್ರು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.



