ಚಿಕ್ಕಬಳ್ಳಾಪುರ : ಹೆಚ್.ಡಿ.ಕುಮಾರಸ್ವಾಮಿ ಅವರನ್ನು 2028ಕ್ಕೆ ಮುಖ್ಯಮಂತ್ರಿ ಮಾಡುವ ಉದ್ದೇಶದಿಂದ ಪಕ್ಷ ಸಂಘಟನೆಗೆ ಮುಂದಾಗಿರುವ ಜೆಡಿಎಸ್ ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ 15 ಸಾವಿರ ಡಿಜಿಟಲ್ ಮೆಂಬರ್ಶಿಪ್ ಗುರಿ ಹೊಂದಲಾಗಿದೆ ಎಂದು ಜೆಡಿಎಸ್ ಡಿಜಿಟಲ್ ಘಟಕದ ರಾಜ್ಯಾಧ್ಯಕ್ಷ ಚಂದನ್ ಗೌಡ ಹೇಳಿದರು. ನಗರದ ಶ್ರೀ ಮರುಳಸಿದ್ದೇಶ್ವರ ಸಮುದಾಯ ಭವನದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಏರ್ಪಡಿಸಿದ್ದ ಡಿಜಿಟಲ್ ಮಾಧ್ಯಮ ಕುರಿತ ಒಂದು ದಿನದ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು.
2026ಕ್ಕೆ ಕಾರ್ಯಕರ್ತರ ಚುನಾವಣೆ ನಡೆಯಲಿದ್ದು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರನ್ನು ಅಧಿಕಾರ ಸ್ಥಾನದಲ್ಲಿ ಕೂರಿಸುವ ಜವಾಬ್ದಾರಿಯನ್ನು ಪಕ್ಷದ ವರಿಷ್ಠರು ನಮಗೆ ನೀಡಿದ್ದಾರೆ. ಈ ದೆಸೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಡಿಜಿಟಲ್ ಮೆಂಬರ್ಶಿಪ್ ಕಾರ್ಯಾಗಾರಗಳನ್ನು ನಡೆಸುವ ಮೂಲಕ ಪಕ್ಷ ಸಂಘಟನೆಯನ್ನು ಮಾಡಲಾಗುತ್ತಿದೆ ಎಂದರು.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವುದೇ ನಮ್ಮ ಪಕ್ಷದ ಗುರಿಯಾಗಿದ್ದು, 2018ರಲ್ಲೂ ಕೂಡ ಇದೇ ರೀತಿಯ ಜನಪರ ಕಾರ್ಯ ಯೋಜನೆ ರೂಪಿಸಲಾಗಿತ್ತು. ಇವುಗಳನ್ನು ಮತದಾರರ ಅಂಗಳಕ್ಕೆ ಮುಟ್ಟಿಸುವಲ್ಲಿ ಎಡವಿದ್ದೇವೆ. 2028ಕ್ಕೆ ಯಾರು ಏನೇ ಹೇಳಿದರೂ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳು 224 ಕ್ಷೇತ್ರ ಗಳಲ್ಲಿ 220ರಲ್ಲಿ ಗೆಲುವು ದಾಖಲಿಸಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿದ್ದಾರೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ಮಾತನಾಡಿ ಸೋಶಿಯಲ್ ಮೀಡಿಯಾ ರಾಜ್ಯಾಧ್ಯಕ್ಷ ಚಂದನ್ ಅವರು ಕ್ಷೇತ್ರಕ್ಕೆ ಬರುವ ಮಾಹಿತಿ ಪಕ್ಷದಿಂದ ಬಂದಿತ್ತು. ಹೀಗಾಗಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದೇವೆ. ಡಿಜಿಟಲ್ ಕಾರ್ಯಾಗಾರದಲ್ಲಿ ಜಿಲ್ಲೆಯ ಜೆಡಿಎಸ್ ಮುಖಂಡರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ.
ಇದು ಸೋಶಿಯಲ್ ಮೀಡಿಯಾ ಜಮಾನಾ ಆಗಿರುವುದರಿಂದ ಈಕಡೆ ವರಿಷ್ಠರು ಹೆಚ್ಚಿನ ಮುತುವರ್ಜಿ ನೀಡಿದ್ದಾರೆ. ಇದರ ಮುಖ್ಯಸ್ಥರಿಗೆ ಹೇಗೆ ಪಕ್ಷದ ಕಾರ್ಯಕರ್ತರು ಕೆಲಸ ಮಾಡಿದರೆ 2028ಕ್ಕೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಬಗ್ಗೆ ಸಮಗ್ರ ಮಾಹಿತಿಯಿದ್ದು ಅದನ್ನು ನಮ್ಮ ಮುಖಂಡರು ಕಾರ್ಯಕರ್ತರಿಗೆ ಮನಮುಟ್ಟುವಂತೆ ಚಂದನ್ ತಿಳಿಸಿ ಕೊಟ್ಟಿದ್ದಾರೆ ಎಂದರು.
ಇಂದು ಸಾಮಾಜಿಕ ಜಾಲತಾಣಗಳು ಪ್ರಚಾರದ ಭಾಗವಾಗಿರುವ ಕಾರಣ ಜೆಡಿಎಸ್ ಪಕ್ಷವು ಕೂಡ ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದೆ. ರಾಜ್ಯಾಧ್ಯಕ್ಷರು ನೀಡುವ ಸೂಚನೆಗಳಂತೆ ಜಿಲ್ಲೆಯಲ್ಲಿ ಸೋಶಿಯಲ್ ಮೀಡಿಯಾ ಘಟಕವನ್ನು ಬಲ ಗೊಳಿಸಿ ಪಕ್ಷದ ವಿಚಾರಗಳನ್ನು ಮತದಾರರಿಗೆ ಮುಟ್ಟಿಸಲಾಗುವುದು ಎಂದರು.
ಈ ವೇಳೆ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ, ಕಾರ್ಯಧ್ಯಕ್ಷ ಕೆ.ಆರ್.ರೆಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ರೋಷನ್ ಅಬ್ಬಾಸ್, ರಾಜ್ಯ ಕಾರ್ಯದರ್ಶಿ ಆರ್. ನಾರಾಯಣಗೌಡ ಮಹಿಳಾ ಅಧ್ಯಕ್ಷೆ ಪ್ರಭಾ ನಾರಾಯಣಗೌಡ, ಬಾಗೇಪಲ್ಲಿ ಜೆಡಿಎಸ್ ತಾಲೂಕು ಲಕ್ಷ್ಮಿ ನಾರಾಯಣ್ , ಗುಡಿಬಂಡೆ ಅಧ್ಯಕ್ಷ ಮಂಜುನಾಥ್ ರೆಡ್ಡಿ, ಶ್ರೀ ಕೆ.ವಿ ರಾಮರೆಡ್ಡಿ, ಗೌರಿ ಬಿದನೂರು ನರಸಿಂಹಮೂರ್ತಿ, ಶಾಂತಕುಮಾರ್, ಸೊಣ್ಣೆಗೌಡ, ಅಕಿಲ್ ರೆಡ್ಡಿ, ಸ್ಟುಡಿಯೋ ಮಂಜುನಾಥ್, ಯಲುವಹಳ್ಳಿ ಅಮೃತ್ ಕುಮಾರ್, ವಕೀಲ ನರಸಿಂಹ ಮೂರ್ತಿ ಮತ್ತಿತರರು ಇದ್ದರು.



