ಮೈಸೂರು: ದರೋಡೆಕೋರರು 7 ಗನ್ ಬಳಸಿ 4 ನಿಮಿಷದಲ್ಲಿ ಹುಣಸೂರು ಚಿನ್ನದ ಅಂಗಡಿಯಿಂದ ಕೆಜಿಗಟ್ಟಲೇ ಚಿನ್ನವನ್ನು ದೋಚಿದ್ದಾರೆ.
ಭಾನುವಾರ(ಡಿ.28) ಮಧ್ಯಾಹ್ನ 2 ಗಂಟೆ 4 ನಿಮಿಷಕ್ಕೆ ಚಿನ್ನದ ಅಂಗಡಿಗೆ ನುಗ್ಗಿದ್ದ ದರೋಡೆಕೋರರು 2 ಗಂಟೆ 8 ನಿಮಿಷಕ್ಕೆ ಪರಾರಿಯಾಗಿದ್ದಾರೆ.
ಮಧ್ಯಾಹ್ನ 2 ಗಂಟೆ 4 ನಿಮಿಷಕ್ಕೆ ಹುಣಸೂರು ಬಸ್ ನಿಲ್ದಾಣದ ಹಿಂಭಾಗದಲ್ಲಿ ಬೈಪಾಸ್ ರಸ್ತೆಯಲ್ಲಿರುವ ʻಸ್ಕೈ ಗೋಲ್ಡ್ ಅಂಡ್ ಡೈಮಂಡ್ಸ್ʼ ಚಿನ್ನಂಗಡಿಗೆ ನುಗ್ಗಿದ್ದಾರೆ.
ಚಿನ್ನ ತೆಗೆದುಕೊಂಡು ಹೋಗಲು ಮೊದಲೇ ಎರಡು ಚೀಲವನ್ನು ತಂದಿದ್ದರು. ಶೋಕೆಸ್‌ನಲ್ಲಿದ್ದ ದೊಡ್ಡ ದೊಡ್ಡ ಗಾತ್ರದ ಚಿನ್ನಾಭರಣವನ್ನ ಒಂದು ಕಡೆ ಗುಡ್ಡೆ ಹಾಕಿದ್ದರು.
ಅಂಗಡಿಗೆ 5 ಜನ ನುಗ್ಗಿದ್ದರೆ ಚಿನ್ನವನ್ನು ಒಬ್ಬ ಮಾತ್ರ ಗುಡ್ಡೆ ಹಾಕಿದ್ದ. ಮತ್ತೊಬ್ಬ ಗನ್ ಹಿಡಿದು ಸಿಬ್ಬಂದಿಯನ್ನು ಬೆದರಿಸುತ್ತಿದ್ದರೆ ಇನ್ನೊಬ್ಬ ಗನ್ ಹಿಡಿದು ಬಾಗಿಲ ಬಳಿ ನಿಂತಿದ್ದ. ಉಳಿದ ಇಬ್ಬರು ಹೊರಗಡೆ ದ್ವಿಚಕ್ರ ವಾಹನ ಸ್ಟಾರ್ಟ್ ಮಾಡಿಕೊಂಡು ನಿಂತಿದ್ದರು.
ಒಬ್ಬಾತ ಎಲ್ಲವನ್ನೂ ಗುಡ್ಡೆ ಹಾಕಿ ಬ್ಯಾಗಿಗೆ ತುಂಬಿ ಕೇವಲ ನಾಲ್ಕೇ ನಿಮಿಷದಲ್ಲಿ ಕೆಜಿ ಚಿನ್ನವನ್ನು ಹೊತ್ತುಕೊಂಡು ಹೋಗಿದ್ದಾರೆ. ಅಂದಾಜು 4ರಿಂದ 5 ಕೋಟಿ ಮೌಲ್ಯದಷ್ಟು ಚಿನ್ನ-ವಜ್ರಾಭರಣ ದರೋಡೆಯಾಗಿದೆ.
ದರೋಡೆಕೋರರು ಚಿನ್ನ ಕದ್ದು ರಸ್ತೆಯಲ್ಲಿ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಒಂದು ಬೈಕ್ ನಲ್ಲಿ ಇಬ್ಬರು, ಮತ್ತೊಂದು ಬೈಕ್‌ನಲ್ಲಿ ಮೂವರು ಹುಣಸೂರಿನಿಂದ ಕೆ.ಆರ್ ನಗರ ಬೈಪಾಸ್ ರಸ್ತೆಯ ಮೂಲಕ ಹೋಗುತ್ತಿರುವ ವಿಡಿಯೋ ಸೆರೆಯಾಗಿದೆ



