Wednesday, December 31, 2025
Google search engine

Homeರಾಜಕೀಯಕೋಗಿಲು ವಿವಾದ : ಸಂತ್ರಸ್ತರ ಪರ್ಯಾಯ ವ್ಯವಸ್ಥೆಗೆ ಬಿಜೆಪಿ ವಿರೋಧ

ಕೋಗಿಲು ವಿವಾದ : ಸಂತ್ರಸ್ತರ ಪರ್ಯಾಯ ವ್ಯವಸ್ಥೆಗೆ ಬಿಜೆಪಿ ವಿರೋಧ

ಬೆಂಗಳೂರು: ಕೋಗಿಲು ಬಡಾವಣೆಯಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸಂತ್ರಸ್ತರನ್ನು ಅಕ್ರಮ ನಿವಾಸಿಗಳು ಎಂದು ಆರೋಪಿಸಿರುವ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ನಡುವೆ ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ಛಲವಾದಿ ನಾರಾಯಣ ಸ್ವಾಮಿ ಅವರು ಕೋಗಿಲು ಬಡಾವಣೆಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಕೋಗಿಲು ಬಡಾವಣೆಯಲ್ಲಿ ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಒತ್ತುವರಿ ತೆರವುಗೊಳಿಸಿತ್ತು. ಕೋಗಿಲು ಬಡಾವಣೆಯಲ್ಲಿ ಬುಲ್ದೋಜರ್ ಮೂಲಕ ಮನೆಗಳ ತೆರವು ಮಾಡಿರುವ ಕ್ರಮಕ್ಕೆ ಕೇರಳ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು.

ಈ ಕುರಿತು ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು ಟ್ವೀಟ್ ಮೂಲಕ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿದ್ದರು. ಬಳಿಕ ಕೇರಳದ ಸಂಸದರಾದ ಎ.ಎ.ರಹೀಮ್ ಹಾಗೂ ಶಾಸಕ ಕೆಟಿ ಜಲೀಲ್ ಅವರು ಕೋಗಿಲು ಬಡಾವಣೆಗೆ ಭೇಟಿ ನೀಡಿ ಸಂತ್ರಸ್ತರ ಪರವಾಗಿ ಧ್ವನಿ ಎತ್ತಿದ್ದರು. ಇದು ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿರುವ ಹಿನ್ನೆಲೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಮಧ್ಯಪ್ರವೇಶ ಮಾಡಿದ್ದರು. ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಪರಿಶೀಲಿಸುವಂತೆಯೂ ಸೂಚನೆ ನೀಡಿದ್ದರು.

ಬಳಿಕ ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಜಮೀರ್ ಅಹ್ಮದ್ ಖಾನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರ್ಯಾಯ ವ್ಯವಸ್ಥೆಯ ಭರವಸೆ ನೀಡಿದ್ದು, ಈ ಪರ್ಯಾಯ ವ್ಯವಸ್ಥೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಬೈಯಪ್ಪನ ಹಳ್ಳಿಯಲ್ಲಿರುವ ವಸತಿ ಸಮಚ್ಚಯದಲ್ಲಿ ಅರ್ಹ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ. ಆದರೆ ವಸತಿ ಸಮಚ್ಚಯ ಇನ್ನೂ ಪೂರ್ಣಗೊಂಡಿಲ್ಲ. ಹೀಗಿದ್ದರೂ ಹೊಸ ವರ್ಷಕ್ಕೆ ಮನೆಗಳನ್ನು ಹಸ್ತಾಂತರ ಮಾಡುವ ಭರವಸೆಯನ್ನು ಜಮೀರ್ ನೀಡಿದ್ದು, ಇದಕ್ಕೆ ಬಿಜೆಪಿ ಮತ್ತು ಜೆಡಿಎಸ್ ಆಕ್ಷೇಪ ವ್ಯಕ್ತಪಡಿಸಿದೆ.

ಅಲ್ಲದೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ಛಲವಾದಿ ನಾರಾಯಣಸ್ವಾಮಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ರೋಹಿಂಗ್ಯಾಗಳಿಗೆ ರಾಜ್ಯದಲ್ಲಿ ಅಧಕೃತವಾಗಿ ವಸತಿ ಸೌಲಭ್ಯ ನೀಡುವುದು ಯಾಕಾಗಿ? ಎಂದು ಪ್ರಶ್ನಿಸಿದ್ದಾರೆ.

ಕೋಗಿಲು ಬಡಾವಣೆ ವಿವಾದದ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಜೊತೆಗೆ ಛಲವಾದಿ ನಾರಾಯಣ ಸ್ವಾಮಿ ಕೂಡಾ ಸಾಥ್ ನೀಡಲಿದ್ದಾರೆ. ಈಗಾಗಲೇ ಅಶೋಕ್ ಅವರು ಅಧಿಕಾರಿಗಳ ಜೊತೆಗೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಕೆಲವೊಂದು ದಾಖಲೆಗಳನ್ನು ಬಿಡುಗಡೆ ಮಾಡಿದ್ದು, ಕೋಗಿಲು ಬಡಾವಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಜೊತೆಗೆ ಸಿಎಂ ಸಿದ್ದರಾಮಯ್ಯ ಅವರಿಗೂ ಒಂದು ಪತ್ರವನ್ನು ಬರೆದಿದ್ದು, ಕೋಗಿಲು ಸಂತ್ರಸ್ತರಿಗೆ ಯಾವುದೇ ಕಾರಣಕ್ಕೂ ಪರ್ಯಾಯ ವ್ಯವಸ್ಥೆ ಕಲ್ಪಿಸಬಾರದು ಎಂದು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular