ಮೈಸೂರು : ರಾಜ್ಯ ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟವನ್ನು ಜ. 8 ಮತ್ತು 09 ರಂದು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ ಹೇಳಿದರು. ಅವರು ಬುಧವಾರ ಜಿಲ್ಲಾ ಪಂಚಾಯತ್ ನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ 2025- 26 ನೇ ರಾಜ್ಯ ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟ ಸಂಘಟಿಸುವ ಸಂಬಂಧ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಹಾಕಿ, ಕುಸ್ತಿ, ಕಬಡ್ಡಿ, ವಾಲಿಬಾಲ್, ಬ್ಯಾಸ್ಕೆಟ್ ಬಾಲ್, ಖೋಖೋ, ಬಾಲ್ ಬ್ಯಾಡ್ಮಿಟಂನ್, ಅಥ್ಲೆಟಿಕ್ಸ್, ಟೆನಿಕಾಯ್ಟ್ , ವೇಲ್ಸ್ ಲಿಫ್ಟಿಂಗ್,ದೇಹದಾರ್ಢ್ಯ, ಪವರ್ ಲಿಫ್ಟಿಂಗ್, ಚೆಸ್, ಥ್ರೋ ಬಾಲ್, ಈಜು, ಕೇರಂ, ಯೋಗ, ಟೆನ್ನಿಸ್ ಕ್ರೀಡೆಗಳು, ಮೈಸೂರು ವಿಶ್ವವಿದ್ಯಾಲಯದ ಸ್ಪೋರ್ಟ್ಸ್ ಪೆವಿಲಿಯನ್ ನಲ್ಲಿ ಪುಟ್ಬಾಲ್, ಷಟಲ್ ಬ್ಯಾಡ್ಮಿಂಟನ್, ಮಹರ್ಷಿ ವಾಲ್ಮೀಕಿ ಶಾಲೆಯಲ್ಲಿ ಟೇಬಲ್ ಟೆನ್ನಿಸ್, ಕೆ. ಜಿ ಕೊಪ್ಪಲು ಕನ್ನೇಗೌಡ ಕ್ರೀಡಾಂಗಣದಲ್ಲಿ ಕ್ರಿಕೆಟ್ ಸ್ಪರ್ಧೆಗಳು ನಡೆಯಲಿದೆ ಎಂದು ತಿಳಿಸಿದರು.
ಸಾಂಸ್ಕೃತಿಕ ಸ್ಪರ್ಧೆಗಳಾದ ಹಿಂದೂಸ್ತಾನಿ ಸಂಗೀತ (ಮೌಖಿಕ ಮತ್ತು ಕ್ಲಾಸಿಕಲ್). ಲಘು ಶಾಸ್ತ್ರೀಯ ಸಂಗೀತ (ಮೌಖಿಕ ಮತ್ತು ಕ್ಲಾಸಿಕಲ್), ಕರ್ನಾಟಕ ಸಂಗೀತ- ಶಾಸ್ತ್ರೀಯ ಸಂಗೀತ, ಲಘು ಶಾಸ್ತ್ರೀಯ ಸಂಗೀತ, ಜಾನಪದ ಗೀತೆ (ವೈಯಕ್ತಿಕ ಮತ್ತು ತಂಡ), ನೃತ್ಯ (ಕಥಕ್, ಮಣಿಪರಿ, ಕುಚಿಪುಡಿ, ಒಡಿಸ್ಸಿ, ಭರತನಾಟ್ಯ, ಜಾನಪದ ನೃತ್ಯ (ತಂಡ), ವಾದ್ಯ ಸಂಗೀತ -ಸ್ಟಿಂಗ್ ವಾದ್ಯಗಳು, ಹಿಂದೂಸ್ಥಾನಿ (ಶಾಸ್ತ್ರೀಯ ಹಾಗೂ ಲಘು ಶಾಸ್ತ್ರೀಯ), ವಿಂಡ್ ವಾದ್ಯಗಳು (ಕರ್ನಾಟಕ-ಶಾಸ್ತ್ರೀಯ ಹಾಗೂ ಲಘು ಶಾಸ್ತ್ರೀಯ), ಪರಿಕೇಷನ್ ವಾದ್ಯಗಳು (ಜನರಲ್), ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಕಿರು ನಾಟಕಗಳ ಸ್ಪರ್ಧೆಗಳು ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದು ತಿಳಿಸಿದರು.
ಕ್ರೀಡಾಕೂಟ ನಡೆಯುವ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು, ವೇದಿಕೆ ಕಾರ್ಯಕ್ರಮಕ್ಕೆ ತೋಟಗಾರಿಕೆ ಇಲಾಖೆಯಿಂದ ಅಲಂಕಾರಿಕ ಹೂವಿನ ಗಿಡಗಳನ್ನು ನೀಡಬೇಕು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ವತಿಯಿಂದ ಅಗತ್ಯ ಔಷಧಿಯೊಂದಿಗೆ ಆಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ತಿಳಿಸಿದರು.
ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ಕುಡಿಯುವ ನೀರು ಹಾಗೂ ವ್ಯವಸ್ಥೆ ಮಾಡಬೇಕು. ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆ ಮುದ್ರಿಸಿ ಗಣ್ಯರನ್ನು ಆಹ್ವಾನಿಸಿ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಶೇಖ್ ತನ್ವೀರ್ ಅಸೀಫ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.



