ಕೆ.ಆರ್.ನಗರ : ಭ್ರಷ್ಟಾಚಾರವೇ ಇಲ್ಲದ ವಾತಾವರಣ ನಿರ್ಮಾಣ ಮಾಡುವುದು ತುಂಬಾ ಕಷ್ಟಕರ ಕೆಲಸವಾಗಿದೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದರು.
ಈ ಕುರಿತು ತಾಲೂಕಿನ ಗಂಧನಹಳ್ಳಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಮಾನವೀಯ ಮೌಲ್ಯಗಳು ಕುರಿತು ವಿಶೇಷ ಉಪನ್ಯಾಸ ಹಾಗೂ ಪ್ರೇರಣಾ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ವೇಳೆ ವಿದ್ಯಾರ್ಥಿಯೊಬ್ಬರು ಸಂವಾದದಲ್ಲಿ ಪಾರದರ್ಶಕತೆ ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು ನನ್ನನ್ನು ಲೋಕಾಯುಕ್ತ ನ್ಯಾಯಮೂರ್ತಿಯನ್ನಾಗಿ ಮಾಡಿದ ಮುಖ್ಯಮಂತ್ರಿಯ ವಿರುದ್ಧವೇ ಪ್ರಕರಣ ದಾಖಲು ಮಾಡಿರುವೆ. ಅಲ್ಲದೆ ಇನ್ನು ಇಬ್ಬರು ಮುಖ್ಯಮಂತ್ರಿಗಳ ವಿರುದ್ಧವೂ ಪ್ರಕರಣ ದಾಖಲು ಮಾಡಿರುವುದು ಪಾರದರ್ಶಕತೆಗೆ ಸಾಕ್ಷಿಯಾಗಿದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
ಮುಂದುವರೆಸುತ್ತಾ ಸಮಾಜದಲ್ಲಿ ಪ್ರತಿಯೊಬ್ಬರೂ ಆರ್ಥಿಕ ಶೈಕ್ಷಣಿಕ ಸಾಮಾಜಿಕವಾಗಿ ಮುಂದೆ ಬರಬೇಕು ನ್ಯಾಯಯುತವಾಗಿ ಸಂಪಾದನೆ ಮಾಡಬೇಕು. ಅಲ್ಲದೇ ಕ್ರಮಬದ್ಧವಾಗಿಯೂ ಇರಬೇಕು ಎಂದರು. ಅಲ್ಲದೆ ಸಮಾಜದಲ್ಲಿ ಪ್ರತಿಯೊಬ್ಬ ಮನುಷ್ಯನೂ ತಮ್ಮಂತೆ ಇತರರನ್ನು ಪ್ರೀತಿಸುವ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳುವ ಮೂಲಕ ಉತ್ತಮ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ವಿದ್ಯಾರ್ಥಿಗಳಿಗೆ ಮೌಲ್ಯಗಳ ಬಗ್ಗೆ ಅರಿವು ಮೂಡಿಸಿದರು.
ಭಾರತದ ರಾಜಕೀಯ ವ್ಯವಸ್ಥೆಯನ್ನು ಸುಧಾರಿಸಲು ತಮ್ಮ ಸಲಹೆ ಏನು ಎಂದು ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂತೋಷ್ ಹೆಗ್ಡೆ ಅವರು ನಗುತ್ತಲೇ ಇದು ನನಗೆ ಇಷ್ಟವಿಲ್ಲದ್ದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಇಒ ಆರ್.ಕೃಷ್ಣಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸ್ವಾಮಿಗೌಡ, ಪ್ರಾಂಶುಪಾಲ ಗಂಗಾಧರಾಚಾರ್, ಪ್ರೌಢಶಾಲೆ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಸೋಮಶೇಖರ್, ಗ್ರಾಮದ ಮುಖಂಡ ಗಾಂಧಿಶಿವಣ್ಣ ಸಿಡಿಸಿ ಉಪಾಧ್ಯಕ್ಷ ರಘು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಕಾಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಮ್ಮ, ಉಪಾಧ್ಯಕ್ಷ ಲೋಕೇಶ್, ಸದಸ್ಯ ಕುಮಾರ್, ಮೋಹನ ಕುಮಾರ್ ಚವಾಣ್, ಮುಖ್ಯಶಿಕ್ಷಕಿ ಕೆ.ಪಿ. ಅಶಾ, ಜಿ.ಜೆ.ಸೋಮಶೆಟ್ಟಿ, ರಮೇಶ್ ಹಾಗೂ ಕೆ.ಆರ್. ನಗರ, ಸಾಲಿಗ್ರಾಮ ಅವಳಿ ತಾಲೂಕಿ ಮಿರ್ಲೆ, ಹೊಸ ಅಗ್ರಹಾರ, ಹಂಪಾಪುರ, ಚಿಕ್ಕವಡ್ಡಗುಡಿ, ಅಂಕನಹಳ್ಳಿ ಗ್ರಾಮಗಳ ಸರ್ಕಾರಿ ಪ್ರೌಢಶಾಲೆಯ ಸುಮಾರು 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.



