ಬಳ್ಳಾರಿ : ಬ್ಯಾನರ್ ಕಟ್ಟುವ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಕಾಂಗ್ರೆಸ್ ಕಾರ್ಯಕರ್ತ ಗುಂಡೇಟಿಗೆ ಬಲಿಯಾದ ದಾರುಣ ಘಟನೆ ಬಳ್ಳಾರಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ಮನೆ ಎದುರು ನಡೆದಿದೆ. ಜನವರಿ 3ರಂದು ವಾಲ್ಮೀಕಿ ಪುತ್ತಳಿ ಅನಾವರಣ ಕಾರ್ಯಕ್ರಮದ ಹಿನ್ನೆಲೆ ಬಳ್ಳಾರಿ ನಗರದಾದ್ಯಂತ ಬ್ಯಾನರ್‌ಗಳನ್ನು ಅಳವಡಿಸಲಾಗುತ್ತಿದೆ. ಅದೇ ರೀತಿ, ಅವಂಬಾವಿಯ ಜನಾರ್ದನ ರೆಡ್ಡಿ ಅವರ ನಿವಾಸದೆದುರು ಬ್ಯಾನರ್ ಅಳವಡಿಸುವುದನ್ನು ಅವರ ಬೆಂಬಲಿಗರು ವಿರೋಧಿಸಿದ್ದಾರೆ. ಈ ವೇಳೆ ಜನಾರ್ದನ ರೆಡ್ಡಿ ಹಾಗೂ ಶಾಸಕ ಭರತ್ ರೆಡ್ಡಿ ಬೆಂಬಲಿಗರ ನಡುವೆ ಭೀಕರ ಸಂಘರ್ಷವೇ ನಡೆದುಹೋಗಿದೆ. ಈ ಸಂಘರ್ಷದ ನಡುವೆ ಅಚಾನಕ್ಕಾಗಿ ಸಿಡಿದ ಗುಂಡಿಗೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತಪಟ್ಟಿದ್ದಾರೆ.
ಕಾಂಗ್ರೆಸ್ಸಿಗರು ಜನಾರ್ದನ ರೆಡ್ಡಿ ಬೆಂಬಲಿಗರ ವಿರುದ್ಧ ಬೊಟ್ಟು ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಗಲಭೆ ನಿಯಂತ್ರಿಸಲು ಪೊಲೀಸರು ಕೂಡ ಏರ್ ಫೈಯರ್ ಮಾಡಿದ್ದಾರೆ.
ಅಸಲಿಗೆ ಜನಾರ್ದನ ರೆಡ್ಡಿ ನಿವಾಸದ ಎದುರು ನಡೆದಿದ್ದೇನು?
ಶಾಸಕ ಭರತ್ ರೆಡ್ಡಿ ಬೆಂಬಲಿಗರು ಜನಾರ್ದನ ರೆಡ್ಡಿ ನಿವಾಸದೆದುರು ಬ್ಯಾನರ್ ಕಟ್ಟುತ್ತಿದ್ದಂತೆ ಗಲಾಟೆಯಾಗಿದೆ. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಕಟ್ಟಿದ್ದ ಬ್ಯಾನರ್ ಅನ್ನು ಬಿಜೆಪಿಗರು ಹರಿದು ಆಕ್ರೋಶ ಹೊರಹಾಕಿದ್ದಾರೆ. ವಿಷಯ ಗೊತ್ತಾದ ಕೂಡಲೇ ಸ್ಥಳಕ್ಕೆ ಬಿಜೆಪಿ ನಾಯಕ ಶ್ರೀರಾಮುಲು ಧಾವಿಸಿದ್ದಾರೆ. ಈ ವೇಳೆ ತಳ್ಳಾಟ ನೂಕಾಟ ಜೋರಾಗಿದೆ. ಗಲಾಟೆ ತೀವ್ರವಾಗುತ್ತಿದ್ದಂತೆ ಶಾಸಕ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಖಾಸಗಿ ಗನ್ ಮ್ಯಾನ್ಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಸಂಘರ್ಷ ಜೋರಾಗುತ್ತಿದ್ದಂತೆಯೇ, ಎರಡೂ ಕಡೆಯ ಬೆಂಬಲಿಗರು ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ಈ ವಿಚಾರ ಗೊತ್ತಾದ ಕೂಡಲೇ ಶಾಸಕ ಭರತ್ ರೆಡ್ಡಿ ಘಟನಾ ಸ್ಥಳಕ್ಕೆ ತೆರಳಲು ಸಿದ್ಧರಾಗಿದ್ದರು. ಈ ಮಾಹಿತಿ ತಿಳಿದ ಜನಾರ್ದನ ರೆಡ್ಡಿ ಬೆಂಬಲಿಗರು, ಕೈಯಲ್ಲಿ ದೊಣ್ಣೆ ಹಿಡಿದು ನಿಂತಿದ್ದರು.
ಪರಿಸ್ಥಿತಿ ಕೈ ಮೀರಿ ಹೋಗುತ್ತಿರುವುದನ್ನು ಗಮನಿಸಿದ ಪೊಲೀಸರು ಮೊದಲು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಲು ಯತ್ನಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದಾಗ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಗಲಭೆಯ ನಡುವೆ ಗುಂಡೊಂದು ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಎಂಬವರಿಗೆ ತಗುಲಿದ್ದು, ಗಾಯಗೊಂಡ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಾಸಕ ಭರತ್ ರೆಡ್ಡಿ ಬೆಂಬಲಿಗ, ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಅಸುನೀಗಿದ್ದಾರೆ.
ನನ್ನ ಹತ್ಯೆಗೆ ಸಂಚು: ಜನಾರ್ದನ ರೆಡ್ಡಿ ಆರೋಪ
ಘಟನೆ ವೇಳೆ ಸಿಡಿದ ಗುಂಡನ್ನು ಶಾಸಕ ಜನಾರ್ದನರೆಡ್ಡಿ ಪ್ರದರ್ಶಿಸಿದ್ದಾರೆ. ಇದು ನನ್ನ ಹತ್ಯೆಗೆ ನಡೆದ ಸಂಚು ಎಂದು ಆರೋಪಿಸಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟ ಶಾಸಕ ಭರತ್ ರೆಡ್ಡಿ, ನನ್ನ ಮುಂದೆ ಇಂಥಾ ಚಿಲ್ಲರೆ ರಾಜಕೀಯ ನಡೆಯಲ್ಲ. ಜನಾರ್ದನರೆಡ್ಡಿ ಹತ್ಯೆಗೆ ಸಂಚು ಮಾಡುವ ಅಗತ್ಯ ನನಗಿಲ್ಲ. ಜನಾರ್ದನ ರೆಡ್ಡಿ ಏನು ದೊಡ್ಡ ಪಾಳೆಗಾರನಾ ಎಂದು ಪ್ರಶ್ನಿಸಿದ್ದಾರೆ.
ಘಟನೆ ಬಗ್ಗೆ ಗೃಹಸಚಿವ ಡಾ. ಜಿ ಪರಮೇಶ್ವರ್ ಶಾಸಕ ಭರತ್ ರೆಡ್ಡಿಯಿಂದ ಮಾಹಿತಿ ಪಡೆದು ಕೊಂಡಿದ್ದಾರೆ. ಇನ್ನು ಪರಿಸ್ಥಿತಿ ಸುಧಾರಿಸದ ಹಿನ್ನೆಲೆ ಘಟನಾ ಸ್ಥಳದ 200 ಮೀ. ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ. ಜನಾರ್ದನ ರೆಡ್ಡಿ ಬಂಧಿಸುವಂತೆ ಅವರ ನಿವಾಸದೆದುರೇ ಶಾಸಕ ಭರತ್ ರೆಡ್ಡಿ ಠಿಕಾಣಿ ಹೂಡಿದ್ದರೆ, ಇತ್ತ ಶ್ರೀರಾಮುಲು ರೆಡ್ಡಿ ನಿವಾಸದಲ್ಲೇ ಉಳಿದುಕೊಂಡಿದ್ದಾರೆ.
ಜನಾರ್ದನ ರೆಡ್ಡಿ, ಶ್ರೀರಾಮುಲು ಸೇರಿ 11 ಮಂದಿ ವಿರುದ್ಧ ಎಫ್ಐಆರ್
ಘಟನೆ ಸಂಬಂಧ ಶಾಸಕ ಜನಾರ್ದನರೆಡ್ಡಿ, ಮಾಜಿ ಸಚಿವ ಶ್ರೀರಾಮುಲು, ಮಾಜಿ ಶಾಸಕ ಸೋಮಶೇಖರ್ ರೆಡ್ಡಿ, ಅಲಿಖಾನ್, ದಮ್ಮೂರ ಶೇಖರ್ ಸೇರಿ 11 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ.



