ನವದೆಹಲಿ : ಬೆಂಗಳೂರಿನಿಂದ ಕನ್ಯಾಕುಮಾರಿ ವರೆಗೆ ಸೈಕಲ್ ಯಾನ ಮಾಡಿದ ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ಅವರ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಂಸಿಸಿದ್ದು, ಸುರೇಶ್ ಕುಮಾರ್ ಅವರಿಗೆ ಕರೆ ಮಾಡಿ ಮೋದಿ ಅಭಿನಂದನೆ ತಿಳಿಸಿದ್ದಾರೆ. ಶಾಸಕರ ಸಾಧನೆಗೆ ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಕುರಿತು ಮೋದಿ ತಮ್ಮ ಸಾಮಾಜಿಕ ಜಾಲತಾಣದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಕೂಡ ಹಂಚಿಕೊಂಡಿದ್ದಾರೆ.
ಇನ್ನೂ 70 ವರ್ಷದ ರಾಜಾಜಿನಗರದ ಶಾಸಕ, ಮಾಜಿ ಸಚಿವ ಸುರೇಶ್ ಕುಮಾರ್ ಇತ್ತೀಚೆಗೆ ತಿಂಗಳುಗಟ್ಟಲೆ ಅನಾರೋಗ್ಯಕ್ಕೆ ಒಳಗಾಗಿದ್ದರು. ಅಪರೂಪದ ನರ ವೈಜ್ಞಾನಿಕ ಕಾಯಿಲೆಯಿಂದ ಚೇತರಿಸಿಕೊಂಡಿದ್ದ ಅವರು ವಿಶ್ರಾಂತಿಯಲ್ಲಿದ್ದರು. ಆದರೂ 5 ದಿನಗಳ ಕಾಲ ಈ ಸವಾಲಿನ 702 ಕಿ.ಮೀ ಪ್ರಯಾಣವನ್ನು ಸೈಕಲ್ನಲ್ಲೇ ಪೂರ್ಣಗೊಳಿಸಿದ್ದ ಅವರು ರಾಜಾಜಿನಗರ ಪೆಡಲ್ ಪವರ್ ಬ್ಯಾನರ್ ಅಡಿಯಲ್ಲಿ ಯುವಕರೊಂದಿಗೆ ಬೆಂಗಳೂರಿನಿಂದ ಕನ್ಯಾಕುಮಾರಿ ವರೆಗೆ 5 ದಿನಗಳ, 702 ಕಿಮೀ ಸೈಕಲ್ ಸವಾರಿಯನ್ನು ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬೆಂಗಳೂರಿನಿಂದ ಕನ್ಯಾಕುಮಾರಿಯವರೆಗೆ ಸೈಕಲ್ ಸವಾರಿ ಕೈಗೊಂಡ ಎಸ್.ಸುರೇಶ್ ಕುಮಾರ್ ಅವರ ಸಾಧನೆ ಶ್ಲಾಘನೀಯ ಮತ್ತು ಸ್ಫೂರ್ತಿದಾಯಕವಾಗಿದ್ದು, ಆರೋಗ್ಯದ ಹಿನ್ನಡೆಗಳನ್ನು ಮೆಟ್ಟಿ ನಿಂತು ಅವರು ಈ ಸಾಧನೆ ಮಾಡಿರುವುದು ಅವರ ದೃಢ ನಿರ್ಧಾರ ಮತ್ತು ಅಚಲ ಮನೋಭಾವವನ್ನು ಎತ್ತಿ ತೋರಿಸುತ್ತದೆ. ಇದು ಫಿಟ್ನೆಸ್ ಕುರಿತು ಪ್ರಮುಖ ಸಂದೇಶವನ್ನೂ ನೀಡುತ್ತದೆ. ಅವರೊಂದಿಗೆ ಮಾತನಾಡಿ, ಅವರ ಈ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸಿದೆ ಎಂದು ಮೋದಿ ತಿಳಿಸಿದ್ದಾರೆ.

ಧನ್ಯವಾದ ತಿಳಿಸಿದ ಶಾಸಕ ಸುರೇಶ್ ಕುಮಾರ್

ಇನ್ನೂ ಮೋದಿಯವರ ಶ್ಲಾಘನೆಗೆ ಶಾಸಕ ಸುರೇಶ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದು, ಅತ್ಯಂತ ಸಂತಸದ ಸಂಗತಿ. ಪ್ರಧಾನಿ ಮೋದಿ ಅವರು ಇದೀಗ ನನಗೆ ಖುದ್ದಾಗಿ ಫೋನ್ ಮಾಡಿ ನಾನು ಕನ್ಯಾಕುಮಾರಿಗೆ ಸೈಕಲ್ ಯಾತ್ರೆ ಮಾಡಿದ್ದಕ್ಕೆ ಅಭಿನಂದಿಸಿ ನನಗೆ ಸ್ಫೂರ್ತಿ ನೀಡಿದರು. 51 ವರ್ಷಗಳ ನಂತರ ಮತ್ತೊಮ್ಮೆ ವಿವೇಕಾನಂದ ಶಿಲಾ ಸ್ಮಾರಕಕ್ಕೆ ನನ್ನ ಸ್ನೇಹಿತರ ಜೊತೆ ಸೈಕಲ್ ಸವಾರಿ ಮಾಡಿರುವುದು ವಿಶೇಷ ಎಂದು ತಿಳಿಸಿದರು.
2025 ರಲ್ಲಿ ನಮ್ಮ ತಂಡ 8,000 ಕಿಮೀ ದೂರದಷ್ಟು ಸೈಕ್ಲಿಂಗ್ ಮಾಡಿರುವ ಮಾಹಿತಿ ಪಡೆದು ತಮ್ಮ ಅಚ್ಚರಿ ಮತ್ತು ಸಂತಸ ಎರಡನ್ನೂ ವ್ಯಕ್ತಪಡಿಸಿದರು. ಅದರಲ್ಲೂ ತೀವ್ರ ಅನಾರೋಗ್ಯದ ನಂತರ ನಾನು ಈ ಕಾರ್ಯ ಕೈಗೊಂಡ ಬಗ್ಗೆ ಪ್ರಧಾನ ಮಂತ್ರಿಗಳು ನನ್ನ ಬೆನ್ನು ತಟ್ಟಿದ್ದು ನನ್ನ ಸುಕೃತ ಎಂದು ಖುಷಿ ಹಂಚಿಕೊಂಡಿದ್ದಾರೆ.



