Friday, January 2, 2026
Google search engine

Homeರಾಜ್ಯರಾಹುಲ್ ಗಾಂಧಿ ವೋಟ್ ಚೋರಿ ಆರೋಪಕ್ಕೆ ಬಿಜೆಪಿ ತಿರುಗೇಟು..!

ರಾಹುಲ್ ಗಾಂಧಿ ವೋಟ್ ಚೋರಿ ಆರೋಪಕ್ಕೆ ಬಿಜೆಪಿ ತಿರುಗೇಟು..!

ಬೆಂಗಳೂರು: ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆ 2024ರ ಕುರಿತ ಸಮೀಕ್ಷೆಯೊಂದು ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ಗಳ ಮೇಲೆ ಜನಸಾಮಾನ್ಯರ ವಿಶ್ವಾಸವನ್ನು ಬಲವಾಗಿ ತೋರಿಸಿದೆ. ಈ ಹಿನ್ನೆಲೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿ ಮಾಡಿದ್ದ ಆರೋಪಗಳಿಗೆ ಬಿಜೆಪಿ ತಿರುಗೇಟು ನೀಡಿದೆ.

ಜ್ಞಾನ, ಮನೋಭಾವ ಮತ್ತು ಅಭ್ಯಾಸ ಕುರಿತ ನಾಗರಿಕರ ಸಮೀಕ್ಷೆಯು, 83.61 % ರಷ್ಟು ಜನರು ಇವಿಎಂಗಳನ್ನು ನಂಬುತ್ತಾರೆ ಎಂದು ಬಹಿರಂಗಪಡಿಸಿದ್ದು, ಒಟ್ಟಾರೆಯಾಗಿ, 69.39% ರಷ್ಟು ಪ್ರತಿಕ್ರಿಯಿಸಿದವರು ಇವಿಎಂಗಳು ನಿಖರವಾದ ಫಲಿತಾಂಶಗಳನ್ನು ನೀಡುತ್ತವೆ ಎಂದು ಒಪ್ಪಿಕೊಂಡರೆ, 14.22% ರಷ್ಟು ಜನರು ಬಲವಾಗಿ ಒಪ್ಪಿಕೊಂಡಿದ್ದಾರೆ. ಈ ಸಮೀಕ್ಷೆಯು ಬೆಂಗಳೂರು, ಬೆಳಗಾವಿ, ಕಲಬುರಗಿ ಮತ್ತು ಮೈಸೂರು ವಿಭಾಗಗಳ 102 ವಿಧಾನಸಭಾ ಕ್ಷೇತ್ರಗಳಲ್ಲಿ 5,100 ಜನರನ್ನು ಒಳಗೊಂಡಿತ್ತು.

ವಿಭಾಗವಾರು ಮಾಹಿತಿ ಪ್ರಕಾರ, ಕಲಬುರಗಿಯಲ್ಲಿ ಇವಿಎಂಗಳು ವಿಶ್ವಾಸಾರ್ಹವಾಗಿವೆ ಎಂದು 83.24% ಜನರು ಒಪ್ಪಿಕೊಂಡಿದ್ದು, 11.24% ಜನರು ಬಲವಾಗಿ ಒಪ್ಪಿಕೊಂಡಿದ್ದಾರೆ. ಮೈಸೂರಿನಲ್ಲಿ 70.67% ಜನರು ಒಪ್ಪಿಕೊಂಡಿದ್ದು, 17.92% ಜನರು ಬಲವಾಗಿ ಒಪ್ಪಿಕೊಂಡಿದ್ದಾರೆ. ಬೆಳಗಾವಿಯಲ್ಲಿ 63.90% ಜನರು ಒಪ್ಪಿಕೊಂಡಿದ್ದು, 21.43% ಜನರು ಬಲವಾಗಿ ಒಪ್ಪಿಕೊಂಡಿದ್ದಾರೆ. ಬೆಂಗಳೂರು ವಿಭಾಗದಲ್ಲಿ ಬಲವಾಗಿ ಒಪ್ಪಿಕೊಂಡವರ ಪ್ರಮಾಣ ಅತಿ ಕಡಿಮೆಯಾಗಿದ್ದರೂ (9.28%), 63.67% ಜನರು ಒಪ್ಪಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ತಟಸ್ಥ ಅಭಿಪ್ರಾಯಗಳು 15.67% ರಷ್ಟಿದ್ದು, ಇದು ಇತರ ವಿಭಾಗಗಳಿಗಿಂತ ಗಣನೀಯವಾಗಿ ಹೆಚ್ಚಾಗಿದೆ.

ಇನ್ನೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪದೇ ಪದೇ ಬಿಜೆಪಿ ಮತ್ತು ಭಾರತ ಚುನಾವಣಾ ಆಯೋಗದ ಮೇಲೆ ಇವಿಎಂಗಳನ್ನು ತಿರುಚಿದ ಮತ್ತು ಚುನಾವಣೆಯಲ್ಲಿ ಮತ ಕಳ್ಳತನ ನಡೆದಿದೆ ಎಂದು ಆರೋಪಿಸುತ್ತಾ ಬಂದಿದ್ದು, ಈ ಸಮೀಕ್ಷೆಯ ಫಲಿತಾಂಶಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ಕರ್ನಾಟಕದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಎಕ್ಸ್‌ ನಲ್ಲಿ ಬರೆದುಕೊಂಡಿದ್ದಾರೆ.

ವರ್ಷಗಳಿಂದ, ರಾಹುಲ್ ಗಾಂಧಿ ದೇಶಾದ್ಯಂತ ಒಂದೇ ಕಥೆಯನ್ನು ಹೇಳುತ್ತಾ ಬಂದಿದ್ದಾರೆ ಭಾರತದ ಪ್ರಜಾಪ್ರಭುತ್ವವು ಅಪಾಯದಲ್ಲಿದೆ. ಇವಿಎಂಗಳು ನಂಬಲರ್ಹವಲ್ಲ. ನಮ್ಮ ಸಂಸ್ಥೆಗಳನ್ನು ನಂಬಲಾಗುವುದಿಲ್ಲ. ಆದರೆ ಕರ್ನಾಟಕವು ಈಗ ಸಂಪೂರ್ಣ ವಿಭಿನ್ನ ಕಥೆಯನ್ನು ಹೇಳಿದೆ ಎಂದಿದ್ದಾರೆ.

ಬಿಜೆಪಿ ಪ್ರಕಾರ, ಈ ರಾಜ್ಯವ್ಯಾಪಿ ಸಮೀಕ್ಷೆಯು ಜನರು ಚುನಾವಣೆಗಳನ್ನು ನಂಬುತ್ತಾರೆ. ಜನರು ಇವಿಎಂಗಳನ್ನು ನಂಬುತ್ತಾರೆ ಮತ್ತು ಜನರು ಭಾರತದ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ನಂಬುತ್ತಾರೆ ಎಂದು ತೋರಿಸಿದೆ. ಈ ಫಲಿತಾಂಶಗಳನ್ನು ಕಾಂಗ್ರೆಸ್‌ಗೆ ಮುಖಕ್ಕೆ ಹೊಡೆದಂತಿದೆ ಎಂದು ಬಿಜೆಪಿ ಹೇಳಿದೆ.

ಇನ್ನೂ ಬಿಜೆಪಿಯ ಈ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಕರ್ನಾಟಕ ಸಚಿವ ಪ್ರಿಯಾಂಕ್ ಖರ್ಗೆ, ಈ ಸಮೀಕ್ಷೆಯನ್ನು ಕರ್ನಾಟಕ ಸರ್ಕಾರ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಇದು ಚುನಾವಣಾ ಆಯೋಗದ ಸಮೀಕ್ಷೆಯಾಗಿದ್ದು, ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಅವರ ಮೂಲಕ ನಡೆಸಲಾಗಿದೆ ಮತ್ತು ಸರ್ಕಾರಿ ಏಜೆನ್ಸಿ ಕೇವಲ ಅದನ್ನು ಪ್ರಕಟಿಸಿದೆ ಎಂದು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular