ಮೈಸೂರು: ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ (IIET), ಮೈಸೂರು ವತಿಯಿಂದ “ಜೇಡಗಳು ಏಕೆ ಮುಖ್ಯ?” ಎಂಬ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಜನವರಿ 4, 2026 ರಂದು ಮಧ್ಯಾಹ್ನ 12.00 ಗಂಟೆಗೆ ಆಯೋಜಿಸಲಾಗಿದೆ.
ಜೆಎಲ್ ಬಿ ರಸ್ತೆ, ಹಾರ್ಡ್‌ವಿಕ್ ಶಾಲಾ ಆವರಣದಲ್ಲಿರುವ IIET ಕ್ಯಾಂಪಸ್‌ನಲ್ಲಿ ಈ ಕಾರ್ಯಕ್ರಮವು ನಡೆಯಲಿದ್ದು ಈ ವಿಶೇಷ ಕಾರ್ಯಕ್ರಮದಲ್ಲಿ ಡಾ. ಅಭಿಜಿತ್ ಎಪಿಸಿ ಅವರು “ಪರಿಸರ ವ್ಯವಸ್ಥೆಯಲ್ಲಿ ಜೇಡಗಳ ಮಹತ್ವ” ಎಂಬ ವಿಷಯದ ಕುರಿತು ಪ್ರಸ್ತುತಿ ಹಾಗೂ ಸಂವಾದಾತ್ಮಕ ಚರ್ಚೆಯನ್ನು ನಡೆಸಿಕೊಡಲಿದ್ದಾರೆ. ಸಾಮಾನ್ಯವಾಗಿ ಭಯ ಮತ್ತು ತಪ್ಪು ಕಲ್ಪನೆಗಳಿಂದ ನೋಡಲಾಗುವ ಜೇಡಗಳು ಪ್ರಕೃತಿಯಲ್ಲಿ ವಹಿಸುವ ಮಹತ್ವದ ಪಾತ್ರ, ಪರಿಸರ ಸಮತೋಲನ ಕಾಪಾಡುವಲ್ಲಿ ಅವುಗಳ ಕೊಡುಗೆ, ಕೀಟ ನಿಯಂತ್ರಣದಲ್ಲಿ ಅವುಗಳ ಸಹಜ ಕಾರ್ಯ ಮತ್ತು ಜೀವವೈವಿಧ್ಯದ ಸಂರಕ್ಷಣೆಯಲ್ಲಿ ಅವುಗಳ ಅಗತ್ಯತೆಯನ್ನು ಈ ಕಾರ್ಯಕ್ರಮದಲ್ಲಿ ಮನವರಿಕೆ ಮಾಡಿಕೊಡಲಾಗುತ್ತದೆ.
ಚಿತ್ರಗಳು, ವೈಜ್ಞಾನಿಕ ಮಾಹಿತಿ ಮತ್ತು ಪ್ರೇಕ್ಷಕರೊಂದಿಗೆ ಸಂವಾದದ ಮೂಲಕ ಜೇಡಗಳ ಕುರಿತು ಅರಿವು ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ವಿದ್ಯಾರ್ಥಿಗಳು, ಶಿಕ್ಷಕರು, ಪರಿಸರಾಸಕ್ತರು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಿಂದ ಉಪಯುಕ್ತ ಮಾಹಿತಿ ಪಡೆಯಲಿದ್ದಾರೆ. ಪ್ರಕೃತಿಯಲ್ಲಿನ ಸಣ್ಣ ಜೀವಿಗಳ ಮಹತ್ವವನ್ನು ಅರಿತುಕೊಳ್ಳುವುದು ಪರಿಸರ ಸಂರಕ್ಷಣೆಯತ್ತ ಮೊದಲ ಹೆಜ್ಜೆಯಾಗಿದೆ ಎಂಬ ಸಂದೇಶವನ್ನು ಈ ಕಾರ್ಯಕ್ರಮ ನೀಡಲಿದೆ.
ಈ ಜಾಗೃತಿ ಕಾರ್ಯಕ್ರಮವು ಸಾರ್ವಜನಿಕರಿಗೆ ಮುಕ್ತವಾಗಿದ್ದು, ಎಲ್ಲರೂ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9845605012 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.



