ವರದಿ :ಸ್ಟೀಫನ್ ಜೇಮ್ಸ್.
ಧಾರವಾಡ
ರಾಷ್ಟ್ರೀಯ ಸಂಗೀತಕ್ಕೆ ಭಾರತದಲ್ಲಿ ತನ್ನದೆಯಾದ ಸ್ಥಾನ ಮಾನ ಇದೆ ಎಂದು ಗದುಗಿನ ಪಂ.ಪಂಚಾಕ್ಷರಿ ಗವಾಯಿಗಳ ಸಂಗೀತ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯೆ ಡಾ. ಸುಮಿತ್ರಾ ಕಾಡದೇವರಮಠ ಹೇಳಿದರು.
ಭಾನುವಾರ ಇಲ್ಲಿನ ಸಿದ್ಧಗಂಗಾ ನಗರದಲ್ಲಿರುವ ಶ್ರೀ ವೀಣಾ, ವಾಣಿ ಸಂಗೀತ ಮಹಾವಿದ್ಯಾಲಯದ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತ ಋುಷಿಮುನಿಗಳ, ಸಂತರ ನೆಲೆವೀಡು. ಜಗತ್ತಿಗೆ ಭಾರತ ಎರಡು ರೀತಿಯ ಕೊಡುಗೆ ನೀಡಿದೆ. ಒಂದು ಶಾಸ್ತ್ರ, ವೇದಾಂತಗಳ ದರ್ಶನ. ಮತ್ತೊಂದು ಸಂಗೀತ ಇವು ಬೇರೆ ಬೇರೆಯಾದರೂ ಇವುಗಳು ಬಿತ್ತುವ ಸಂದೇಶ ಮಾತ್ರ ಅಧ್ಯಾತ್ಮ. ಅಧ್ಯಾತ್ಮದೊಂದಿಗೆ ಮನರಂಜನೆ, ಆನಂದ ದೊರಕುತ್ತದೆ. ಭಾರತದ ಸಂಗೀತ ಮೋದಕ. ಪಾಶ್ಚಾತ್ಯ ಸಂಗೀತ ಮಾರಕ. ಭಾರತದ ಸಂಗೀತ ವಿಕಾಸದ ಹಾದಿ ತೋರಿದರೆ, ಪಾಶ್ಚಾತ್ಯ ಸಂಗೀತ ವಿಕಾರದ ದಾರಿ ತೋರುತ್ತದೆ. ಶಾಸ್ತ್ರ ಹಾಗಲಕಾಯಿ, ನೆಲ್ಲಿಕಾಯಿಯಾದರೆ, ಸಂಗೀತ ಮಾವಿನ ಹಣ್ಣಿನಂತೆ. ಅದು ಎಲ್ಲರಿಗೂ ರುಚಿಕರವಾಗಿರುತ್ತದೆ ಎಂದರು.
ವಿಶ್ವ ಶಾಂತಿ ಹಾಗೂ ದೇಶದ ವಿಕಾಸಕ್ಕೆ ಇಂಥ ಸಂಗೀತ ಕಾರ್ಯಕ್ರಮ ಹೆಚ್ಚು ನಡೆಯಬೇಕು. ಸಂಗೀತಕ್ಕೆ ಸಾಕಷ್ಟು ವರ್ಷಗಳ ಪರಂಪರೆ ಇದೆ. ಮಕ್ಕಳಿಗೆ ಸಂಗೀತ ಕಲಿಸುವುದರಿಂದ ಭಾರತದ ಸಂಸ್ಕೃತಿ ಕಲಿಸಿದಂತಾಗುತ್ತದೆ. ಶಾಲೆಯಲ್ಲಿ ಪಾಠದ ಜೊತೆಗೆ ಮಕ್ಕಳಿಗೆ ಎಲ್ಲ ಪೋಷಕರು ಸಂಗೀತ ಕಲಿಸುವ ಸಂಪ್ರದಾಯ ಬೆಳೆಸಿ ಭಾರತದ ಪರಂಪರೆಯನ್ನು ಬೆಳೆಸಬೇಕು ಎಂದು ಕರೆ ನೀಡಿದರು.
ಕೃಷ್ಣಪ್ಪ ನಾಯಕ, ಚಂದ್ರಶೇಖರ ಮಮದಾಪುರ, ಶರಣಕುಮಾರ ಮೇಡೆದಾರ, ಮೈಥುಲಿ ಮೇಡೆದಾರ, ಉಮಾದೇವಿ ಮಣ್ಣೂರು ಇದ್ದರು.



