ಮಂಡ್ಯ: ಕಳೆದ 10 ದಿನಗಳ ಹಿಂದೆ ಎರಡೂ ದುರ್ಘಟನೆ ನಡೆದಿದ್ದು, ನಾಲೆಗಳಿಗೆ ವಾಹನಗಳು ಬಿದ್ದು ಅಪಘಾತವಾಗುತ್ತಿರುವ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ನಾಲೆಗಳು ಹಾಗೂ ಕೆರೆಗಳ ಬದಿಗಳಲ್ಲಿ ತಡೆಗೋಡೆ ನಿರ್ಮಿಸಲು ಸೈನ್ ಬೋರ್ಡ್, ಅಪಘಾತ ವಲಯ ಗುರುತಿಸಲು ಸಮಿತಿಯನ್ನು ರಚಿಸಿರುವುದಾಗಿ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ತಿಳಿಸಿದ್ದಾರೆ.
ಕಳೆದ 10 ದಿನಗಳ ಹಿಂದೆ ವಿಸಿನಾಲೆಗೆ ಬಿದ್ದ ಕಾರು ಚಾಲಕ ಮೃತ ಪಟ್ಟಿದ್ದರು ಜೊತೆಗೆ ಗಾಮನಹಳ್ಳಿ ಬಳಿ ಒಂದು ಪ್ರಕರಣ ನಡೆದಿದೆ. ನಮ್ಮ ಜಿಲ್ಲೆಯಲ್ಲಿ 512 ಕಿ.ಮೀ ಉದ್ದದ ವಿಸಿ ನಾಲೆ 300ಕ್ಕೂ ಹೆಚ್ಚು ಕಿ.ಮೀ ರಸ್ತೆ ವ್ಯಾಪ್ತಿಯಲ್ಲಿ ಇದೆ. ಈ ಹಿನ್ನಲೆಯಲ್ಲಿ ತಡೆಗೋಡೆಯ ಅವಶ್ಯಕತೆ, ಸೈನ್ ಬೋರ್ಡ್, ಅಪಘಾತ ವಲಯ ಗುರುತಿಸಲು ಸಮಿತಿ ರಚನೆ ಮಾಡಿರುವುದಾಗಿ ತಿಳಿಸಿದ್ದಾರೆ.
ಲೋಕೋಪಯೋಗಿ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಕಾವೇರಿ ನೀರಾವರಿ ನಿಗಮ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಳಗೊಂಡ ತಂಡ ರಚನೆ ಮಾಡಲಾಗಿದ್ದು, ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದರು.
ತಂಡದ ಸದಸ್ಯರು 10-15 ದಿನಗಳಲ್ಲಿ ವರದಿ ನೀಡಲಿದ್ದಾರೆ. ವರದಿ ಬಂದ ಬಳಿಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಎಲ್ಲಾ ಕಡೆ ತಡೆಗೋಡೆ ನಿರ್ಮಾಣ ಮಾಡಲು ಸಾಧ್ಯವಾಗಲ್ಲ. ಕೆಲವು ಕಡೆ ಮಾತ್ರ ತಡೆಗೋಡೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಬಹಳ ಮುಖ್ಯವಾಗಿ ಸೈನ್ ಬೋರ್ಡ್(ನಾಮಪಲಕ)ದ ಅವಶ್ಯಕತೆ ಇದೆ. ಜನರು ಸಹ ವಿಸಿ ನಾಲೆ ಇರುವ ಕಡೆ ಕಡಿಮೆ ಮಿತಿಯಲ್ಲಿ ಸಂಚಾರ ಮಾಡಬೇಕಿದೆ ಎಂದರು.
ಗುಂಡಿ ಬಿದ್ದ ಜಾಗವನ್ನು ಮುಚ್ಚುವ ಕಾರ್ಯವಾಗಬೇಕು. ಸಮಿತಿಗೆ ಸಮಯ ಕೊಡಲಾಗಿದೆ. ಲೋಕೋಪಯೋಗಿ ಇಲಾಖೆಯಿಂದ ವರದಿ ತರಿಸಿದ್ದೇನೆ. ಸುಮಾರು 212 ಕಿ.ಮೀ ಪರಿಶೀಲನೆ ನಡೆಸಿ, 94 ಕೋಟಿಯ ಕ್ರಾಸ್ ಬೇರಿಯರ್, ರಸ್ತೆ, ಸೈನ್ ಬೋರ್ಡ್ ಮಾಡಲು ವರದಿ ಕೊಟ್ಟಿದ್ದಾರೆ. ಮತ್ತೆ ಪರಿಶೀಲನೆ ಮಾಡಲು ಸಮಿತಿಗೆ ವರದಿ ಕೇಳಿದ್ದೇನೆ. ತಾಂತ್ರಿಕವಾಗಿ ಪರಿಶೀಲನೆ ಬಳಿಕ ಕ್ರಮ ಕೈಗೊಳ್ಳಲು ಮುಂದಾಗುತ್ತೇವೆ ಎಂದು ಹೇಳಿದ್ದಾರೆ.