Saturday, January 10, 2026
Google search engine

HomeUncategorizedಆರ್ ಟಿಓ ಅಕ್ರಮ: ಅನಧಿಕೃತ ಚೆಕ್‌ ಪೋಸ್ಟ್‌ ಶೆಡ್‌ ನಿರ್ಮಾಣ ಮಾಡಿ ಹಣ ವಸೂಲಿ

ಆರ್ ಟಿಓ ಅಕ್ರಮ: ಅನಧಿಕೃತ ಚೆಕ್‌ ಪೋಸ್ಟ್‌ ಶೆಡ್‌ ನಿರ್ಮಾಣ ಮಾಡಿ ಹಣ ವಸೂಲಿ

ಬೀದರ್‌ : ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳು ಶಾಮೀಲಾಗಿ ಇಲಾಖೆಯ ವಾಹನ ಬಳಸಿಕೊಂಡು ಅಕ್ರಮವಾಗಿ ಚೆಕ್‌ ಪೋಸ್ಟ್‌ ನಿರ್ಮಿಸಿ ಹಣ ಸುಲಿಗೆ ಮಾಡುವ ಮೂಲಕ ಸರಕಾರದ ಬೊಕ್ಕಸಕ್ಕೆ ಭಾರಿ ಪ್ರಮಾಣದಲ್ಲಿ ನಷ್ಟ ಉಂಟು ಮಾಡಿರುವುದು ಬಯಲಾಗಿದ್ದು, ಸರ್ಕಾರಿ ಸಾರಿಗೆ ತೆರಿಗೆಯನ್ನು ವಸೂಲಿ ಮಾಡದೇ, ಅನಧಿಕೃತವಾಗಿ ಹಣ ವಸೂಲಿ ಮಾಡಿ, ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟವನ್ನುಂಟು ಮಾಡಿರುವುದು ಕಂಡು ಬಂದಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ವಾಹನ ಚಾಲಕರಿಂದ /ಮಾಲೀಕರುಗಳಿಂದ ಅನಧಿಕೃತವಾಗಿ ಹಣ ವಸೂಲಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳು ಹಾಗೂ ಇಬ್ಬರು ಖಾಸಗಿ ವ್ಯಕ್ತಿಗಳನ್ನು ಆರೋಪಿಗಳನ್ನಾಗಿಸಲಾಗಿದ್ದು, ಓಂಕಾರ ಲಾಡವಂತಿ ಮೊದಲ ಆರೋಪಿಯಾಗಿದ್ದರೆ, ಅಪರಿಚಿತ 2ನೇ ಆರೋಪಿ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳನ್ನು ಮೂರನೇ ಆರೋಪಿಯನ್ನಾಗಿಸಲಾಗಿದೆ.

ಈ ಕುರಿತು ಹುಮನಾಬಾದ್‌ ಪೊಲೀಸ್‌ ಠಾಣೆಯಲ್ಲಿ ಬಿಎನ್‌ಎಸ್‌ ಕಾಯಿದೆ ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಇನ್ನೂ ಆರ್‌ಟಿಒ ಇಲಾಖೆಗೆ ಸೇರಿದ ಕೆಎ39, ಜಿ9999 ಸಂಖ್ಯೆಯ ವಾಹನವು ಖಾಸಗಿ ವ್ಯಕ್ತಿ ಓಂಕಾರ ಎಂಬಾತನ ಬಳಿ ಪತ್ತೆಯಾಗಿದ್ದು, ಹುಮನಾಬಾದ್‌ ಹೊರವಲಯದ ರಿಂಗ್‌ ರಸ್ತೆಯಲ್ಲಿ ಸರಕಾರಿ ವಾಹನ ನಿಲ್ಲಿಸಿ, ತಾತ್ಕಾಲಿಕವಾಗಿ ಚೆಕ್‌ಪೋಸ್ಟ್‌ನಂತೆ ಶೆಡ್‌ ನಿರ್ಮಿಸಲಾಗಿದೆ.

ಆರ್‌ಟಿಒ ಅಧಿಕಾರಿಗಳ ಆದೇಶದಂತೆ ವಾಹನ ಚಾಲಕರು /ಮಾಲೀಕರಿಂದ ಹಣ ಪಡೆದು ಅವರ ಪರ್ಮಿಟ್‌ ಚೆಕ್‌ ಮಾಡಿ, ಅದು ಇಲ್ಲದೇ ಇದ್ದಲ್ಲಿ ಅವರನ್ನು ಮೂರು ಕಿಮೀ ಅಂತರದಲ್ಲಿರುವ ಆರ್‌ಟಿಒ ಚೆಕ್‌ ಪೋಸ್ಟ್‌ಗೆ ಕಳುಹಿಸಿಕೊಡಲಾಗುತ್ತದೆ. ಲೋಕಾಯುಕ್ತರ ಶೋಧನೆಯ ವೇಳೆಯೂ ವಾಹನಗಳ ಚಾಲಕರು, ಮಾಲೀಕರು ಹಣ ನೀಡುವುದು ಕಂಡು ಬಂದಿದೆ. ಹಣ ನೀಡದೇ ಇದ್ದಲ್ಲಿ ಆರ್‌ಟಿಒ ಅಧಿಕಾರಿಗಳು, ಖಾಸಗಿ ವ್ಯಕ್ತಿಗಳು ವಾಹನ ಸಮೇತ ಹಿಡಿದು ವಿನಾಃ ಕಾರಣ ಕಿರುಕುಳ ನೀಡುತ್ತಾರೆ ಎಂದು ಚಾಲಕರು, ಮಾಲೀಕರು ತಿಳಿಸಿರುವುದಾಗಿ ಲೋಕಾಯುಕ್ತರು ದೂರಿನಲ್ಲಿ ನಮೂದಿಸಿದ್ದಾರೆ.

ಇನ್ನೂ ದಿನಕ್ಕೆ 300 ರೂ. ನಂತೆ ಹಣ ಪಡೆದು ಖಾಸಗಿ ವ್ಯಕ್ತಿಗಳು ಸಾರಿಗೆ ಇಲಾಖೆಯ ಅಧಿಕಾರಿಗಳ ಕೈ ಕೆಳಗೆ ಕೆಲಸ ಮಾಡುತ್ತಿರುವುದನ್ನೂ ಲೋಕಾಯುಕ್ತರು ಪತ್ತೆ ಹಚ್ಚಿದ್ದಾರೆ. ಅಲ್ಲದೆ ಮುಂಬಯಿ- ಹೈದರಾಬಾದ್‌ ರಾಷ್ಟ್ರೀಯ ಹೆದ್ದಾರಿಯ ಚೆಕ್‌ಪೋಸ್ಟ್‌ನಲ್ಲಿ ಆರ್‌ಟಿಒ ಅಧಿಕಾರಿಗಳ ಆದೇಶದಂತೆ ಶಿಫ್ಟ್‌ನಲ್ಲಿ ಕೆಲಸ ಮಾಡುವ ಈ ಖಾಸಗಿಯವರು, ವಾಹನಗಳನ್ನು ನಿಲ್ಲಿಸಿ, ಪರಮಿಟ್‌ ಚೆಕ್‌ ಮಾಡಿ, ಅಲ್ಲಿಂದ ಮೂರು ಕಿಮೀ ಅಂತರದ ಚೆಕ್‌ಪೋಸ್ಟ್‌ನ ಆರ್‌ಟಿಒ ಅಧಿಕಾರಿಗಳ ಬಳಿ ವಾಹನಗಳನ್ನು ಕಳುಹಿಸುತ್ತಿದ್ದಾರೆ.

ಸರಕಾರಿ ಚೆಕ್‌ಪೋಸ್ಟ್‌ನಂತೆ ನಿರ್ಮಿಸಲಾದ ಶೆಡ್‌ನಲ್ಲೇ ರಾತ್ರಿ ವೇಳೆ ಕೆಲಸ ಮಾಡುವ ಖಾಸಗಿಯವರು ವಿಶ್ರಾಂತಿ ಪಡೆಯುತ್ತಾರೆ ಎಂದೂ ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ಲೋಕಾಯುಕ್ತ ಅಧಿಕಾರಿಗಳು ನೀಡಿರುವ ದೂರಿನ ಮೇರೆಗೆ ಹುಮನಾಬಾದ್‌ ಪೊಲೀಸ್‌ ಠಾಣೆಯಲ್ಲಿಬಿಎನ್‌ಎಸ್‌ ಕಾಯ್ದೆಯ ಕಲಂ 60(ಎ), 204, 318 (4), 319(2), 308(2) ಜತೆಗೆ 3(5) ಅಡಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular