ಬಳ್ಳಾರಿ: ಬ್ಯಾನರ್ ಗಲಭೆ ಭಾರಿ ಸುದ್ದಿಯಲ್ಲಿದ್ದು, ರಾಜಕೀಯವಾಗಿ ಭಾರಿ ವಿವಾದ ಉಂಟುಮಾಡಿದ ಈ ಪ್ರಕರಣಕ್ಕೆ ಪೊಲೀಸ್ ತನಿಖೆ ಚುರುಕುಗೊಂಡಿದ್ದು ಇದೀಗ ಹಲವು ಮಂದಿ ಬಂಧನ ಭೀತಿಯಿಂದ ಬಳ್ಳಾರಿ ತೊರೆದಿದ್ದಾರೆ.
ಈಗಾಗಲೇ ಡಿಜಿಟಲ್ ಸಾಕ್ಷ್ಯದ ಆಧಾರವಾಗಿ 26 ಜನರನ್ನು ಪೊಲೀಸರು ಬಂಧಿಸಿದ್ದು, ಇದೀಗ ಮತ್ತೇ ಬಿಜೆಪಿಯ 33 ಹಾಗೂ ಕಾಂಗ್ರೆಸ್‌ನ 30ಕ್ಕೂ ಹೆಚ್ಚು ಜನರಿಗೆ ವಿಚಾರಣೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎನ್ನಲಾಗಿದೆ.
ಅಲ್ಲದೆ ಬಿಜೆಪಿಯ ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ, ಶ್ರೀರಾಮುಲು, ಮಾಜಿ ಶಾಸಕ ಸುರೇಶ್ ಬಾಬು, ರೆಡ್ಡಿ ಆಪ್ತ ಅಲಿಖಾನ್ ಸೇರಿದಂತೆ 33 ಜನರಿಗೆ ನೋಟಿಸ್ ನೀಡಲಾಗಿದ್ದು, ಗಲಭೆಯಲ್ಲಿ ಭಾಗಿಯಾಗದ ಬಳ್ಳಾರಿ ನಗರದ ಮುಂಚೂಣಿ ಬಿಜೆಪಿ ಕಾರ್ಯಕರ್ತರಿಗೂ ನೋಟಿಸ್ ನೀಡುತ್ತಿದ್ದಾರೆ.
ಈ ವಿಚಾರವಾಗಿ ಗಲಭೆಯಲ್ಲಿ ಭಾಗಿಯಾಗದಿದ್ದರೂ 39 ವಾರ್ಡ್‌ಗಳ ಅನ್ವಯ ಲಿಸ್ಟ್ ಮಾಡಿ ಟಾರ್ಗೆಟ್ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ವಿಡಿಯೋ ದೃಶ್ಯಗಳನ್ನು ಆಧರಿಸಿ 107 ಮಂದಿಗೆ ನೋಟಿಸ್ ಕೊಡಲಾಗಿದೆ. ಇದರಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.



