ಬೆಂಗಳೂರು: ಕೋಗಿಲು ಲೇಔಟ್‌ನಲ್ಲಿದ್ದ 161 ಮನೆ ನೆಲಸಮ ಆಗಿದೆ. ದಾಖಲಾತಿ ಪರಿಶೀಲನೆ ಆಗುತ್ತಿದೆ. 26 ಜನರಿಗೆ ಮನೆ ಕೊಡಬಹುದು ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದು, ಇನ್ನೂ ಕೋಗಿಲು ಲೇಔಟ್‌ನಲ್ಲಿ ನಿರಾಶ್ರಿತರಿಗೆ ಗೃಹ ಭಾಗ್ಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲರ ದಾಖಲೆ ನೋಡಬೇಕು. ದಾಖಲಾತಿ ಪರಿಶೀಲನೆ ಆಗುತ್ತಿದೆ. ಕಂಡೀಷನ್ ಹಾಕಿ ಮನೆ ಕೊಡುತ್ತೇವೆ. ವಲಸಿಗರಿಗೆ ಯಾವ ಕಾರಣಕ್ಕೂ ಕೊಡಲ್ಲ. ಸ್ಥಳೀಯರು ಆಗಿರಬೇಕು, ಅವರಿಗೆ ಮಾತ್ರ ಮನೆ ಎಂದು ಹೇಳಿದ್ದಾರೆ.
ಈ ಬಗ್ಗೆ ಇನ್ನೂ ಕ್ಯಾಬಿನೆಟ್‌ನಲ್ಲಿ ಯಾವುದೇ ಚರ್ಚೆ ಮಾಡಿಲ್ಲ, ಸಿಎಂ ಈಗಾಗಲೇ ಮೀಟಿಂಗ್ ಮಾಡಿ ಸೂಚನೆ ಕೊಟ್ಟಿದ್ದು, 26 ಜನರ ದಾಖಲೆಗಳು ಕ್ಲಿಯರ್ ಆಗಿದೆಯಂತೆ. ಅವರಿಗೆ ಇವತ್ತು ಮನೆ ಕೊಡಬಹುದು ಎಂದು ತಿಳಿಸಿದ್ದಾರೆ.
ಕೋಗಿಲು ಬಡಾವಣೆಯಲ್ಲಿರುವ ಒಟ್ಟು 119 ಕುಟುಂಬಗಳ ಪೈಕಿ 76 ಕುಟುಂಬಗಳು ವಾಸ ಮಾಡುತ್ತಿರೋದು ಕಳೆದ 6 ತಿಂಗಳಿನಿಂದ. ಉಳಿದ 43 ಕುಟುಂಬಗಳಲ್ಲಿ 37 ಕುಟುಂಬಗಳು ಬೆಂಗಳೂರು ಮೂಲದವರೇ, ಇನ್ನುಳಿದ 6 ಕುಟುಂಬಗಳು ಕೆಲ ವರ್ಷಗಳ ಹಿಂದೆ ಕೋಗಿಲು ಲೇಔಟ್‌ಗೆ ಬಂದು ನೆಲೆಸಿದ್ದಾರೆ.
ಹೀಗಾಗಿ 37 ಕುಟುಂಬಗಳು ಹೊರತುಪಡಿಸಿದ್ದರೆ, ಉಳಿದೆಲ್ಲರು ವಲಸಿಗರು ಎಂದು ಪರಿಗಣಿಸಲಾಗಿದೆ. ಈ ಬಗ್ಗೆ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಇಂದು ಸಣ್ಣ ಲಿಸ್ಟ್ ಸಲ್ಲಿಕೆ ಆಗಲಿದ್ದು, ಸಚಿವ ಸಂಪುಟ ಸಭೆಯಲ್ಲೂ ಕೂಡ 37 ಅರ್ಹರ ಬಗ್ಗೆ ಚರ್ಚೆ ಆಗುವ ಸಾಧ್ಯತೆಯಿದೆ. 37 ಮಂದಿ ಅರ್ಹರಾಗಿದ್ದು, ದಾಖಲಾತಿಗಳನ್ನ ಪರಿಶೀಲಿಸಲಾಗುತ್ತಿದೆ. ಪೊಲೀಸ್ ವೆರಿಫಿಕೇಷನ್ ಆಗಿರುವ ಅರ್ಹರಿಗೆ ಮನೆ ಸಿಗಲಿದೆ ಎಂದಿದ್ದಾರೆ.



