ಕೋಲಾರ : ಕೋಲಾರ ಸೇರಿದಂತೆ ರಾಜ್ಯದಲ್ಲಿ ಚಳಿ ಹೆಚ್ಚಾಗಿದೆ. ಶೀತ ವಾತಾವರಣ ಇರುವ ಕಾರಣ ಚಳಿಗೆ ಹೊರಬರಲು ಆಗುತ್ತಿಲ್ಲ. ಕೋಲಾರದಲ್ಲಿ ಈ ಚಳಿ ವಾತಾವರಣಕ್ಕೆ ಮಾಂಸ ಹಾಗೂ ಮೊಟ್ಟೆಯ ಬೆಲೆ ಕೂಡ ಏರಿಕೆಯಾಗಿದೆ. ಚಳಿಯಿಂದ ಕೋಳಿಗಳು ಕೂಡ ಮೊಟ್ಟೆ ಇಡುತ್ತಿಲ್ಲ, ಇದರಿಂದ ಮೊಟ್ಟೆ ಹಾಗೂ ಕೋಳಿ ಮಾಂಸಕ್ಕೆ ದರ ಏರಿಕೆಯಾಗಿದೆ. ಇದೀಗ ಈ ಬೆಲೆ ಏರಿಕೆಯ ಬಿಸಿ ಮಾಂಸ ಪ್ರಿಯರಿಗೆ ತಟ್ಟಿದೆ ಎಂದು ಹೇಳಲಾಗಿದೆ. ಕೋಳಿ ಫಾರಂಗಳಲ್ಲಿ ಈ ಚಳಿಗೆ ಕೋಳಿಗಳು ನಡುಗುತ್ತಿದೆ. ಕಳೆದ ನಾಲ್ಕೈದು ತಿಂಗಳಿಂದ ನಿರಂತರವಾಗಿ ಚಳಿ ವಾತಾವರಣದಿಂದ ಕೋಳಿಗಳು ಮೊಟ್ಟೆ ಇಡುತ್ತಿಲ್ಲ. ಒಂದು ಕೆಜಿ ಚಿಕನ್ ಬೆಲೆ 280 ರಿಂದ 300 ರೂಪಾಯಿಗೆ ಏರಿಕೆ ಕಂಡಿದೆ, 180 ರಿಂದ 200 ರೂಪಾಯಿ ಇದ್ದ ಚಿಕನ್ ಬೆಲೆ ಈಗ ಏಕಾಏಕಿ ಏರಿಕೆ ಕಂಡಿದೆ. ಸದ್ಯ ಈ ಬೆಲೆ ಏರಿಕೆಗೆ ಕಾರಣ ಶೀತ ವಾತಾವರಣ ಎಂದು ಹೇಳಲಾಗಿದೆ. ಈ ವಾತಾವರಣದಿಂದ ಕೋಳಿ ಫಾರಂಗಳಲ್ಲಿ ಕೋಳಿಯ ಬೆಳವಣಿಗೆ ಮೇಲೆ ಪರಿಣಾಮ ಬೀದಿದೆ.
2.2 ಕೆಜಿ ತೂಕ ಬರಬೇಕಿದ್ದ ಕೋಳಿ ಕೇವಲ 1.8 ಕೆಜಿ ತೂಕ ಬರುತ್ತಿದೆ, ಅಲ್ಲದೆ ಕೋಳಿಯ ಮೊಟ್ಟೆ ಕೂಡಾ ದರ ಏರಿಕೆಯಾಗಿದೆ. ಒಂದು ತಿಂಗಳಲ್ಲಿ 28 ರಿಂದ 30 ಮೊಟ್ಟೆ ಇಡುತ್ತಿದ್ದ ಕೋಳಿಗಳು ಸದ್ಯ ವಾತಾವರಣದ ಎಫೆಕ್ಟ್ ನಿಂದಾಗಿ 22 ರಿಂದ 24 ಮೊಟ್ಟೆ ಇಡುತ್ತಿದೆ ಎಂದು ಹೇಳಲಾಗಿದೆ. ಇದು ಗ್ರಾಹಕರು ಹಾಗೂ ಮಾರಾಟಗಾರರ ಮೇಲೆ ದೊಡ್ಡ ಮಟ್ಟದ ಪರಿಣಾಮವನ್ನು ಉಂಟು ಮಾಡಿದೆ. ಚಳಿಯ ವಾತಾವರಣದಿಂದಾಗಿ ಮಾಂಸ ಸೇವನೆ ಪ್ರಮಾಣ ಕೂಡಾ ಸಹಜವಾಗಿಯೇ ಹೆಚ್ಚಾಗಿದೆ ಹಾಗಾಗಿ ಬೇಡಿಕೆ ತಕ್ಕ ಉತ್ಪಾದನೆ ಸಿಗುತ್ತಿಲ್ಲ. ಈ ಕಾರಣಕ್ಕೆ ಬೆಲೆ ಏರಿಕೆಯಾಗಿದೆ.
ಕೋಳಿಯ ಬೆಳವಣಿಗೆ ಹಾಗೂ ಚಳಿಗೂ ಏನು ಸಂಬಂಧ ಎಂಬ ಪ್ರಶ್ನೆ ಮೂಡುವುದು ಸಹಜ, ಅದಕ್ಕೆ ಇಲ್ಲಿದೆ ನೋಡಿ ಕಾರಣ, ಕೋಳಿಗೆ ಫಾರಂಗಳಲ್ಲಿ ಸರಿಯಾದ ಸಮಯಕ್ಕೆ ಆಹಾರ ನೀರು, ಔಷದಿ ಎಲ್ಲವೂ ಸರಬರಾಜಾದರೂ ಕೂಡಾ ಚಳಿಗಾಲದಲ್ಲಿ ಶೀತದ ವಾತಾವರಣ ಇರುವ ಕಾರಣ ಸೂರ್ಯನ ಬೆಳಕು ಇರುವುದಿಲ್ಲ. ಇದರಿಂದ ಬಿಸಿಲಿನ ಪ್ರಮಾಣ ಕಡಿಮೆಯಾಗುತ್ತಿದೆ. ಇದರ ಜತೆಗೆ ಸಂಜೆ ಬೇಗ ಕತ್ತಲಾಗುತ್ತಿದೆ. ಬೆಳಿಗ್ಗೆ ತಡವಾಗಿ ಬೆಳಕಾಗೋದರಿಂದಾಗಿ ಸೂರ್ಯನ ಬಿಸಿಲಿಲ್ಲದೆ ಇರುವುದು ಕೋಳಿಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತಿದೆ.
ಇನ್ನು ಈ ಬೆಲೆ ಏರಿಕೆಯಿಂದ ಗ್ರಾಹಕರು ಮಾಂಸ ಹಾಗೂ ಮೊಟ್ಟೆಗಳನ್ನು ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹೀಗೆ ಜನರ ಯೋಚನೆ ಬದಲಾಗಿದೆ. 300 ರೂ. ಕೊಟ್ಟು ಕೋಳಿ ಮಾಂಸ ತಿನ್ನುವ ಬದಲು. ಮಟನ್ ತಿನ್ನಬಹುದಲ್ಲ ಎಂದು ಯೋಚನೆ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಈ ಬೆಲೆ ಏರಿಕೆಯಿಂದ ಮಾರುಕಟ್ಟೆಯಲ್ಲಿ ಚಿಕನ್ ಹಾಗೂ ಮೊಟ್ಟೆ ಬೇಡಿಕೆ ಕಡಿಮೆ ಆಗಿದೆ. ಆದರೆ ಕೆಲವೊಂದು ಕಡೆ ಇದರಿಂದ ಕೋಳಿ ಫಾರಂ ಮಾಲೀಕರಿಗೆ ಯಾವುದೇ ನಷ್ಟ ಇಲ್ಲ ಎಂದು ಹೇಳಲಾಗುತ್ತಿದೆ.



