ವಡೋದರಾ : ಭಾನುವಾರ ನಡೆದ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 93 ರನ್ ಬಾರಿಸಿ, ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ವಿರಾಟ್ ಕೊಹ್ಲಿ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯೊಂದನ್ನು ಸರಿಗಟ್ಟಿದ್ದು, 93 ರನ್ ಬಾರಿಸುವ ಮೂಲಕ ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಸಚಿನ್ ಜತೆ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.
ಉಭಯ ಆಟಗಾರರು 1750 ರನ್ ಬಾರಿಸಿದ್ದಾರೆ. ಕೊಹ್ಲಿ ಮುಂದಿನ ಪಂದ್ಯದಲ್ಲಿ ಒಂದು ರನ್ ಬಾರಿಸಿದರೆ ಸಚಿನ್ ದಾಖಲೆ ಪತನಗೊಳ್ಳಲಿದೆ.
ಕಿವೀಸ್ ವಿರುದ್ಧ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಒಟ್ಟಾರೆ ದಾಖಲೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ಹೆಸರಿನಲ್ಲಿದ್ದು, ಪಾಂಟಿಂಗ್ ಬ್ಲಾಕ್ ಕ್ಯಾಪ್ಸ್ ವಿರುದ್ಧ 51 ಏಕದಿನ ಪಂದ್ಯಗಳನ್ನು ಆಡಿದ್ದಾರೆ ಮತ್ತು 50 ಇನ್ನಿಂಗ್ಸ್‌ಗಳಲ್ಲಿ 1971 ರನ್ ಗಳಿಸಿದ್ದಾರೆ.
ಕೊಹ್ಲಿ ಈಗ ಬ್ಲಾಕ್ ಕ್ಯಾಪ್ಸ್ ವಿರುದ್ಧ ಅತಿ ಹೆಚ್ಚು ಏಕದಿನ ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಪಂದ್ಯದಲ್ಲಿ 42 ರನ್ ಗಳಿಸುತ್ತಿದ್ದಂತೆ ಶ್ರೀಲಂಕಾದ ಕುಮಾರ್ ಸಂಗಕ್ಕರರನ್ನು ಹಿಂದಿಕ್ಕಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 2ನೇ ಗರಿಷ್ಠ ರನ್ಸ್ಕೋರರ್ ಎನಿಸಿಕೊಂಡಿದ್ದಾರೆ. ದಿಗ್ಗಜ ಸಚಿನ್ ತೆಂಡುಲ್ಕರ್ ಅಗ್ರಸ್ಥಾನದಲ್ಲಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಡೆವೊನ್ ಕಾನ್ವೆ ಮತ್ತು ಹೆನ್ರಿ ನಿಕೊಲ್ಸ್ ಮೊದಲ ವಿಕೆಟ್ ಜೊತೆಯಾಟದಲ್ಲಿ 117 ರನ್ ಬಾರಿಸಿದರು. ಆ ಬಳಿಕ ಡ್ಯಾರಿಲ್ ಮಿಚೆಲ್ ಅವರ ಆಟದ ಬಲದಿಂದ ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 300 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಭಾರತ ತಂಡ 49 ಓವರ್‌ಗಳಲ್ಲಿ 6ಕ್ಕೆ306 ರನ್ ಗಳಿಸಿ ಗೆಲುವು ಸಾಧಿಸಿತು.
ಪಂದ್ಯದ ಸಂಕ್ಷಿಪ್ತ ಸ್ಕೋರ್ ನೋಡುವುದಾದರೆ, ನ್ಯೂಜಿಲೆಂಡ್: 50 ಓವರ್‌ಗಳಲ್ಲಿ 8ಕ್ಕೆ 300 (ಡೆವೊನ್ ಕಾನ್ವೆ 56, ಹೆನ್ರಿ ನಿಕೊಲ್ಸ್ 62, ಡ್ಯಾರಿಲ್ ಮಿಚೆಲ್ 84, ಮಿಚೆಲ್ ಹೇ 18, ಮೈಕೆಲ್ ಬ್ರೇಸ್‌ವೆಲ್ 16, ಕ್ರಿಸ್ಟನ್ ಕ್ಲಾರ್ಕ್ ಔಟಾಗದೇ 24, ಮೊಹಮ್ಮದ್ ಸಿರಾಜ್ 40ಕ್ಕೆ2, ಹರ್ಷಿತ್ ರಾಣಾ 65ಕ್ಕೆ2, ಪ್ರಸಿದ್ಧಕೃಷ್ಣ 60ಕ್ಕೆ2, ಕುಲದೀಪ್ ಯಾದವ್ 52ಕ್ಕೆ1).
ಭಾರತ: 49 ಓವರ್‌ಗಳಲ್ಲಿ 6ಕ್ಕೆ 306 (ರೋಹಿತ್ ಶರ್ಮಾ 26, ಶುಭಮನ್ ಗಿಲ್ 56, ವಿರಾಟ್ ಕೊಹ್ಲಿ 93, ಶ್ರೇಯಸ್ ಅಯ್ಯರ್ 49, ಕೆ.ಎಲ್. ರಾಹುಲ್ ಔಟಾಗದೇ 29, ಹರ್ಷಿತ್ ರಾಣಾ 29, ಕೈಲ್ ಜೆಮಿಸನ್ 41ಕ್ಕೆ4, ಆದಿತ್ಯ ಅಶೋಕ್ 55ಕ್ಕೆ1, ಕ್ರಿಸ್ಟನ್ ಕ್ಲಾರ್ಕ್ 73ಕ್ಕೆ1).



