ಹಾಸನ : 2028ರ ವಿಧಾನಸಭಾ ಚುನಾವಣೆಯಲ್ಲಿ ಅರಸೀಕೆರೆ ಕ್ಷೇತ್ರದಿಂದ ಮಾಜಿ ಸಚಿವ ಹೆಚ್.ಡಿ ರೇವಣ್ಣ ಸ್ಪರ್ಧಿಸಲಿದ್ದಾರೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಕೆ.ಎಂ ಶಿವಲಿಂಗೇಗೌಡ ಮಾತನಾಡಿದ್ದು, ರೇವಣ್ಣಗೆ ಪಂಥಾಹ್ವಾನ ನೀಡಿದ್ದಾರೆ. ಈ ವೇಳೆ ದೇವೇಗೌಡರ ಕುಟುಂಬದ ವಿರುದ್ಧ ಗುಡುಗಿದ ಶಾಸಕ ಶಿವಲಿಂಗೇಗೌಡ, ತಾಕತ್ತಿದ್ರೆ ಬರಲಿ, ಬಂದು ನಿಲ್ಲಲಿ ಎಂದು ಸವಾಲ್ ಹಾಕಿದ್ದಾರೆ.
ಈ ಕುರಿತು ಸಿಎಂ ಸಿದ್ದರಾಮಯ್ಯ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿ ಮಾತನಾಡಿದ ಅವರು, ನಾನು ಅರಸೀಕೆರೆ ಬಿಟ್ಟು ಯಾಕ್ರಿ ಹೊಳೆನರಸೀಪುರಕ್ಕೆ ಹೋಗಲಿ, ನಾನು ಈ ಭೂಮಿಯಲ್ಲೇ ರಾಜಕೀಯ ಮಾಡ್ತೀನಿ, ಇಲ್ಲೇ ಬದುಕ್ತೀನಿ ಇಲ್ಲೇ ಸಾಯ್ತಿನಿ. ಇದು ನನಗೆ ರಾಜಕೀಯ ಪುನರ್ಜನ್ಮ ನೀಡಿದ ಭೂಮಿ ಎಂದು ಗುಡುಗಿದ್ದಾರೆ.
ಭಾಷಣದುದ್ದಕ್ಕೂ ಗುಡುಗಿದ ಅವರು, ನಾನು ಯಾವತ್ತು ಹೆಂಡತಿ, ಮಕ್ಕಳು ಕಟ್ಟಿಕೊಂಡು ರಾಜಕೀಯ ಮಾಡಿಲ್ಲ. ಸಿದ್ದರಾಮಯ್ಯ ಅವರ ಫೋಟೋ ಮುಂದೆ ನಿಂತು ಹೇಳ್ತಿದ್ದೇನೆ. ನನ್ನ ಮಗನನ್ನ ಕೂಡ ರಾಜಕೀಯಕ್ಕೆ ತರೋದಿಲ್ಲ. ಅವನು ಡಾಕ್ಟರ್ ಆಗಿದ್ದಾನೆ. ಅವನು ರಾಜಕೀಯಕ್ಕೆ ಬರೋದೆ ಬೇಡ ಎಂದು ತಿಳಿಸಿದ್ದಾರೆ.
ಇನ್ನೂ ನಾನು 30 ವರ್ಷದ ರಾಜಕೀಯದಲ್ಲಿ ಹೆಂಡತಿನಾ ಒಂದೇ ಒಂದು ಸಭೆಗೆ ಕರೆತಂದಿಲ್ಲ. ಒಂದೇ ಒಂದು ಊರಿಗೆ ಕರ್ಕೊಂಡ್ ಬಂದಿಲ್ಲ. ಈ ರೀತಿ ಕಟ್ಟು ನಿಟ್ಟಿನ ರಾಜಕೀಯ ಮಾಡಿದವರಲ್ಲಿ ನಾನು ರಾಜ್ಯದಲ್ಲಿ ಮೊದಲನೆಯವನು, ಎರಡನೇಯವರು ಸಿದ್ದರಾಮಯ್ಯ, ಅವರೂ ಅವರ ಪತ್ನಿಯನ್ನು ಎಲ್ಲೂ ಕರೆದುಕೊಂಡು ಬಂದಿಲ್ಲ ಎಂದು ಶಿವಲಿಂಗೇಗೌಡ ಹೇಳಿದ್ದಾರೆ.
ಅಲ್ಲದೇ ನಾನೇನು ಇಲ್ಲಿ ಶಾಶ್ವತ ಅಲ್ಲ, ಯಾರಾದ್ರೂ ಪುಣ್ಯಾತ್ಮ ಹುಟ್ಕೊತ್ತಾರೆ. ಮುಂದೆ ಬೇರೆ ಸಮಾಜದವರು ಬರಲಿ, ದಾನ ಮಾಡ್ತೀನಿ ದುಡೀತಿನಿ ಎಂದ ಶಿವಲಿಂಗೇಗೌಡ. ಹಾಸನದಲ್ಲಿ ಇನ್ಮುಂದೆ ರಣರಂಗವೇ ಶುರುವಾಗುತ್ತೆ ಎಂದು ಹೇಳಿದ್ದಾರೆ.
ಇದು ರಣರಂಗ, ಮಹಾಭಾರತ ಇವತ್ತೇ ಘೋಷಣೆ ಮಾಡಿದ್ದೀನಿ. ತಾಕತ್ ಇದ್ದರೆ ಬರಲಿ ಬಂದು ಚುನಾವಣೆಗೆ ಸ್ಪರ್ಧಿಸಲಿ ಎಂದು ರೇವಣ್ಣಗೆ ಶಿವಲಿಂಗೇಗೌಡ ಪರೋಕ್ಷವಾಗಿ ಸವಾಲು ಹಾಕಿದ್ದು, ಮುಂದೆ ಯುದ್ಧ ಏನಾಗುತ್ತೆ ನೋಡೋಣ. ನನಗೆ ಗೊತ್ತಿದೆ ಸಿದ್ದರಾಮಯ್ಯ , ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನನ್ನನ್ನ ಮಂತ್ರಿ ಮಾಡ್ತೀನಿ ಅಂತ ಹೇಳಿದ್ದರು. ಮಂತ್ರಿ ಮಾಡುತ್ತಾರೆ, ಕ್ಷೇತ್ರದಲ್ಲಿ ಇನ್ನೂ ಒಳ್ಳೆಯ ಕೆಲಸ ಮಾಡುತ್ತೇನೆ ಎಂದು ಶಿವಲಿಂಗೇಗೌಡ ಹೇಳಿಕೆ ನೀಡಿದ್ದಾರೆ.



