ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನನ್ನು ಬಾಂಗ್ಲಾದೇಶಿ ಪ್ರಜೆ ಎಂದು ಆರೋಪಿಸಿ, ನಾಲ್ವರು ವ್ಯಕ್ತಿಗಳು ಹಲ್ಲೆ ನಡೆಸಿದ ಘಟನೆ ಮಂಗಳೂರಿನ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜಾರ್ಖಂಡ್ ಮೂಲದ ಗಿರಿಜಾ ಅನ್ಸಾರಿ ಕಳೆದ 10–15 ವರ್ಷಗಳಿಂದ ವಲಸೆ ಕಾರ್ಮಿಕನಾಗಿ ಜೀವನ ನಡೆಸುತ್ತಿದ್ದು, ಸ್ಥಳೀಯರಾದ ಈ ನಾಲ್ವರು ಆರೋಪಿಗಳು ಸತತವಾಗಿ “ನೀನು ಬಾಂಗ್ಲಾದೇಶದ ಪ್ರಜೆ” ಎಂದು ಆರೋಪಿಸಿ ದಾಖಲೆ ತೋರಿಸು ಎಂದು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.
ತಾನು ಬಾಂಗ್ಲಾದೇಶಿ ಅಲ್ಲ ಎಂದು ಹೇಳಿದಾಗಲೂ ಅವನ ತಲೆಯ ಮೇಲೆ ಹೊಡೆದು ಹಲ್ಲೆ ಮಾಡಿದಾಗ ತೀವ್ರವಾಗಿ ರಕ್ತಸ್ರಾವವಾಗಿದೆ. ಮಾನಸಿಕ ಹಿಂಸೆಗೆ ಒಳಗಾದ ಅನ್ಸಾರಿ ದುಷ್ಕರ್ಮಿಗಳ ಭಯದಿಂದ ಪೊಲೀಸರಿಗೆ ದೂರು ನೀಡಲು ಹಿಂಜರಿದಿದ್ದರು. ಸ್ಥಳೀಯ ಹಿಂದೂ ಮಹಿಳೆ ಈತನನ್ನು ಬಂದು ರಕ್ಷಿಸಿದ್ದು ತದನಂತರ ಕೆಲ ಸ್ಥಳೀಯ ಮುಖಂಡರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ವಲಸೆ ಕಾರ್ಮಿಕನನ್ನು ರಕ್ಷಿಸಿದ್ದಾರೆ. ಸತ್ಯಗಳನ್ನು ಪರಿಶೀಲಿಸಲಾಗುತ್ತದೆ. ಹಲ್ಲೆಗೊಳಗಾದವ ಭಾರತೀಯರು. ಕೆಲಸಕ್ಕಾಗಿ ಇಲ್ಲಿಗೆ ಬಂದಿದ್ದ. ಆರೋಪಿಗಳ ವಿರುದ್ಧ 307 ಪ್ರಕರಣ ದಾಖಲಾಗಿದೆ.
126(2), 109, 352, 351(3),353, 118(1) r/w 3(5) of BNS ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಗುರುತಿಸಲಾಗಿದೆ. ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಸೂಚನೆ ನೀಡಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.



