ಕಡಲನಗರಿ ಮಂಗಳೂರಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಭಾರತೀಯನನ್ನೇ ಬಾಂಗ್ಲಾದೇಶದವನು ಎಂದು ಹೇಳಿ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನಿಗೆ ತಂಡವೊಂದು ಹಲ್ಲೆ ಮಾಡಿದೆ. ಅಂದಹಾಗೇ ಈ ಘಟನೆ ಮಂಗಳೂರಿನ ಕಾವೂರು ಠಾಣೆ ವ್ಯಾಪ್ತಿಯ ಕೂಳೂರು ಚರ್ಚ್ ಬಳಿ ನಡೆದಿದ್ದು ಘಟನೆ ಸಂಬಂಧಿಸಿ ನಾಲ್ವರು ಯುವಕರ ಮೇಲೆ ಕಾವೂರು ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಕೂಳೂರು ನಿವಾಸಿಗಳಾದ ಸಾಗರ್, ಧನುಷ್, ಲಾಲು ಯಾನೆ ರತೀಶ್ ದಾಸ್ ಎಂಬುವವರನ್ನು ಬಂಧಿಸಲಾಗಿದೆ.
ಜಾರ್ಖಂಡ್ ಮೂಲದ ದಿಲ್‌ಜಾನ್ ಅನ್ಸಾರಿ ಎಂಬಾತ ಕಳೆದ 10-15 ವರ್ಷಗಳಿಂದ ಮಂಗಳೂರಿನಲ್ಲಿ ಗಾರೆ ಕೆಲಸ ಮಾಡುತ್ತಿದ್ದು ತನ್ನ ಇನ್ನೊಬ್ಬ ಗೆಳೆಯನ ಜೊತೆಗೆ ಕುಳೂರಿನಲ್ಲಿ ನೆಲೆಸಿದ್ದ. ಈತನಿಗೆ ಸ್ಥಳೀಯರಾದ ನಾಲ್ವರು ಆರೋಪಿಗಳು ಕಳೆದ 5-6 ತಿಂಗಳಿನಿಂದ “ನೀನು ಬಾಂಗ್ಲಾದೇಶದ ಪ್ರಜೆ” ಎಂದು ಹೇಳಿ ಹಲ್ಲೆ ನಡೆಸುತ್ತಿದ್ದರು. ಅಲ್ಲದೆ ಜೈ ಶ್ರೀರಾಮ್ ಕೂಗುವಂತೆ ಈ ನಾಲ್ವರು ಒತ್ತಾಯಿಸಿದರು ಎಂದು ಹಲ್ಲೆಗೊಳಗಾದ ವ್ಯಕ್ತಿ ಹೇಳಿದ್ದಾನೆ.
ತಾನು ಜಾರ್ಖಂಡ್ ಮೂಲದವನೆಂದು ತಿಳಿಸಿದರೂ ಆರೋಪಿಗಳು ಕೇಳದೆ, ದಾಖಲೆಗಳನ್ನು ಒದಗಿಸುವಂತೆ ಒತ್ತಡ ಹೇರುತ್ತ ದೌರ್ಜನ್ಯ ಎಸಗಿದ್ದಾರೆ ಎಂದು ದೂರಲಾಗಿದೆ. ನಿನ್ನೆ ಭಾನುವಾರ ಸಂಜೆ ಮತ್ತೆ ದಿಲ್‌ಜಾನ್ ಅನ್ಸಾರಿ ಮೇಲೆ ಹಲ್ಲೆ ನಡೆಸಿದ್ದು ತಲೆಗೆ ಪೆಟ್ಟು ಬಿದ್ದು ರಕ್ತ ಬಂದಿದೆ. ಈ ವೇಳೆ, ಸ್ಥಳೀಯ ಹಿಂದೂ ಮಹಿಳೆಯರು ರಕ್ಷಿಸಿ ಹೊಡೆಯದಂತೆ ತಡೆದಿದ್ದಾರೆ. ಇನ್ನು ಈ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕಾವೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ . 03/2026 600: 126(2), 352, 351(3), 353, 109, 118(1) 3(5) ಭಾರತೀಯ ನ್ಯಾಯ ಸಂಹಿತೆ 2023 ರಂತೆ ಪ್ರಕರಣ ದಾಖಲಾಗಿದೆ.
ಆರೋಪಿಗಳನ್ನು ಮಂಗಳೂರು ಉತ್ತರ ಉಪವಿಭಾಗದ ಎ.ಸಿ.ಪಿ. ಶ್ರೀಕಾಂತ್ ಕೆ. ರವರ ಮಾರ್ಗದರ್ಶನದಂತೆ ಕಾವೂರು ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ರಾಘವೇಂದ್ರ ಎಂ. ಬೈಂದೂರು ರವರು, ಪೊಲೀಸ್ ಉಪ-ನಿರೀಕ್ಷಕರಾದ ಮಲ್ಲಿಕಾರ್ಜುನ ಬಿರಾದಾರ ಹಾಗೂ ಕಾವೂರು ಠಾಣಾ ಸಿಬ್ಬಂದಿಗಳಾದ ಎ.ಎಸ್.ಐ ಚಂದ್ರಹಾಸ್ ಸನೀಲ್ ಹೆಚ್.ಸಿ ಬಾಲಕೃಷ್ಣ ಹಾಗೂ ಸಿಬ್ಬಂದಿಗಳಾದ ರಾಘವೇಂದ್ರ, ರಿಯಾಜ್, ನಾಗರಾಜ್, ಹನುಮಂತ ರವರುಗಳೊಂದಿಗೆ ಆರೋಪಿತರನ್ನು ಪತ್ತೆಮಾಡಿ ದಸ್ತಗಿರಿ ಮಾಡಲಾಗಿದೆ.



