ಬೆಂಗಳೂರು: ಆರ್ಸಿಬಿ ಕಾಲ್ತುಳಿತ ದುರಂತದ ಪರಿಣಾಮ ಇದೀಗ ಬೆಂಗಳೂರಿನ ಪ್ರತಿಷ್ಠಿತ ಲಾಲ್ಬಾಗ್ ಫಲಪುಷ್ಪ ಪ್ರದರ್ಶನಕ್ಕೂ ತಟ್ಟಿದೆ. ಗಣರಾಜ್ಯೋತ್ಸವ ಹಿನ್ನೆಲೆ 219ನೇ ಫಲಪುಷ್ಪ ಪ್ರದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿ ಲಕ್ಷಾಂತರ ಜನ ಸೇರುವ ಸಾಧ್ಯತೆ ಇರುವುದರಿಂದ ಪೊಲೀಸ್ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಕಟ್ಟೆಚ್ಚರ ವಹಿಸಿದೆ.
ಇಂದಿನಿಂದ ಆರಂಭವಾಗಿ ಜನವರಿ 26ರವರೆಗೆ ನಡೆಯಲಿರುವ ಈ ಫಲಪುಷ್ಪ ಪ್ರದರ್ಶನಕ್ಕೆ ಸುಮಾರು 12 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದೆ. ವಿಶೇಷವಾಗಿ ವೀಕೆಂಡ್ ಹಾಗೂ ರಜಾ ದಿನಗಳಲ್ಲಿ ಜನಸಂದಣಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಳೆದ ವರ್ಷದ ಅನುಭವವನ್ನು ಗಮನದಲ್ಲಿಟ್ಟುಕೊಂಡು, ಈ ಬಾರಿ ಪ್ರವೇಶ ಹಾಗೂ ನಿರ್ಗಮನ ದ್ವಾರಗಳ ಮೇಲೆ ವಿಶೇಷ ಗಮನ ಹರಿಸಲಾಗಿದೆ.
ಫ್ಲವರ್ ಶೋದ ಪ್ರಮುಖ ಆಕರ್ಷಣೆಯಾದ ಗಾಜಿನ ಮನೆಯ ಬಳಿ ಈ ಬಾರಿ ಕಠಿಣ ಕ್ರಮ ಜಾರಿಯಲ್ಲಿದೆ. ಹಿಂದಿನ ವರ್ಷಗಳಲ್ಲಿ ಪ್ರವಾಸಿಗರಿಗೆ ಇಲ್ಲಿ ನಿಲ್ಲಲು ಅವಕಾಶ ನೀಡಲಾಗುತ್ತಿತ್ತು. ಇದರಿಂದ ಒಂದೇ ಸ್ಥಳದಲ್ಲಿ ಹೆಚ್ಚಿನ ಜನ ಸೇರಿ ಗೊಂದಲ ಉಂಟಾಗುತ್ತಿತ್ತು. ಈ ಸಮಸ್ಯೆ ತಪ್ಪಿಸಲು, ಈ ಬಾರಿ ಗಾಜಿನ ಮನೆ ಸುತ್ತಮುತ್ತ ‘ನೋ ಮ್ಯಾನ್ ಝೋನ್’ ಘೋಷಿಸಿ, ಜನರು ನಿಲ್ಲದೆ ಸಾಗುವಂತೆ ವ್ಯವಸ್ಥೆ ಮಾಡಲಾಗಿದೆ.
ಇಡೀ ಲಾಲ್ಬಾಗ್ ಆವರಣದಲ್ಲಿ 135ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಪೊಲೀಸ್ ನಿಗಾವನ್ನು ಮತ್ತಷ್ಟು ಬಲಪಡಿಸಲಾಗಿದೆ. ಜೊತೆಗೆ, ಲಾಲ್ಬಾಗ್ ಸುತ್ತಮುತ್ತ ಬೇರೆ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನರನ್ನು ಡೈವರ್ಟ್ ಮಾಡುವ ಯೋಜನೆಯೂ ರೂಪಿಸಲಾಗಿದೆ.
ಈ ಬಾರಿ ಪ್ರಸಿದ್ಧ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಬದುಕು ಹಾಗೂ ಬರಹವನ್ನು ಆಧರಿಸಿದ ಪುಷ್ಪ ವಿನ್ಯಾಸಗಳು ಪ್ರದರ್ಶನದ ವಿಶೇಷ ಆಕರ್ಷಣೆಯಾಗಿದ್ದು, 12 ದಿನಗಳ ಕಾಲ ಪ್ರವಾಸಿಗರಿಗೆ ಕಣ್ಮನ ಸೆಳೆಯಲಿವೆ.



