Wednesday, January 14, 2026
Google search engine

Homeರಾಜಕೀಯಸ್ಥಳೀಯ ಚುನಾವಣೆ ಮೈತ್ರಿ: ಬಿಜೆಪಿ-ಜೆಡಿಎಸ್‌ಗೆ ಕಗ್ಗಂಟು

ಸ್ಥಳೀಯ ಚುನಾವಣೆ ಮೈತ್ರಿ: ಬಿಜೆಪಿ-ಜೆಡಿಎಸ್‌ಗೆ ಕಗ್ಗಂಟು

ಬೆಂಗಳೂರು : ಸ್ಥಳೀಯ ಸಂಸ್ಥೆ ಚುನಾವಣೆ ಮೈತ್ರಿ ವಿಚಾರವೀಗ ಬಿಜೆಪಿ, ಜೆಡಿಎಸ್​​ಗೆ ಕಗ್ಗಂಟಾಗಿ ಮಾರ್ಪಟ್ಟಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್​​ ಜೊತೆ ಮೈತ್ರಿಗೆ ಬಿಜೆಪಿಯ ಕೆಲವರು ವಿರೋಧ ವ್ಯಕ್ತಪಡಿಸಿದ ಕಾರಣ,  ಬಿಜೆಪಿ ಹೈಕಮಾಂಡ್ ಜೊತೆ ಕೇಂದ್ರ ಸಚಿವ ಮತ್ತು ಜೆಡಿಎಸ್​​ ನಾಯಕ ಕುಮಾರಸ್ವಾಮಿ ಶೀಘ್ರದಲ್ಲೇ ಸಭೆ ನಡೆಸಲಿದ್ದಾರೆ. ಆ ಮೂಲಕ  ಸಂಕ್ರಾಂತಿ ಬಳಿಕ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲು  ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ಸ್ಥಳೀಯ ಸಂಸ್ಥೆ ಚುನಾವಣೆಗೆ ಬಿಜೆಪಿ ಜೊತೆ ಮೈತ್ರಿ ವಿಚಾರವಾಗಿ ಈಗಾಗಲೇ ಜೆಡಿಎಸ್ ಶಾಸಕರು, ಮುಖಂಡರಿಂದ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಸ್ಥಳೀಯ ಸಂಸ್ಥೆ, ಜಿಬಿಎ ಚುನಾವಣೆಯಲ್ಲಿ ಮೈತ್ರಿಗೆ ಒಲವು ವ್ಯಕ್ತವಾಗಿದ್ದು, ಬಿಜೆಪಿ ಜೊತೆಗೇ ಚುನಾವಣೆ ಎದುರಿಸೋಣ ಎಂದು ಮುಖಂಡರು ತಿಳಿಸಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮೈತ್ರಿಯಾಗದಿದ್ದರೆ, ಮುಂಬರುವ ವಿಧಾನಸಭೆ ಚುನಾವಣೆಗೆ ಒಟ್ಟಾಗಿ ಹೋಗೋದು ಕಷ್ಟ. ಕಾರ್ಯಕರ್ತರು, ಮುಖಂಡರ ನಡುವೆ ಗೊಂದಲವಾದ್ರೆ ಅದು ಕಾಂಗ್ರೆಸ್​ಗೆ ಲಾಭ ಆಗಲಿದೆ. ಹೀಗಾಗಿ ಎಲ್ಲಾ ಚುನಾವಣೆಗೂ ಮೈತ್ರಿಯಲ್ಲೇ ಹೋಗೋಣ ಎಂಬ ನಿಲುವು ಜೆಡಿಎಸ್ ಮುಖಂಡರದ್ದು ಎನ್ನಲಾಗಿದೆ.

ನಾವು ಲೋಕಸಭೆ, ವಿಧಾನಸಭೆ ಮತ್ತು ಪರಿಷತ್ತಿನ ಚುನಾವಣೆಗಳಲ್ಲಿ ಬಿಜೆಪಿ ಮೈತ್ರಿಯೊಂದಿಗೆ ಸ್ಪರ್ಧಿಸಲಿದ್ದೇವೆ. ಆದರೆ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿಯೂ ಜೆಡಿಎಸ್ ಸ್ವಂತ ಬಲದ ಮೇಲೆ ಸ್ಪರ್ಧಿಸಲಿದೆ ಎಂದು ಜೆಡಿಎಸ್​​ ವರಿಷ್ಠ ಹೆಚ್​.ಡಿ. ದೇವೇಗೌಡ ಈ ಹಿಂದೆ ಹೇಳಿದ್ದರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂಬ  ಬಿ.ವೈ. ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದ್ದರು. ಆ ಬೆನ್ನಲ್ಲೇ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿಗೆ ಮಂಡ್ಯ ಬಿಜೆಪಿಯಿಂದಲೂ ವಿರೋಧ ಕೇಳಿಬಂದಿತ್ತು. ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಕೋರ್ ಕಮಿಟಿ ಸದಸ್ಯರ ಮುಂದೆ ಈ ಕುರಿತು ನಾಯಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಮಾಜಿ ಸಂಸದೆ ಸುಮಲತಾ ಅಂಬರೀಷ್ ಮತ್ತು ಮಾಜಿ ಸಚಿವ ಕೆ.ಸಿ. ನಾರಾಯಣ ಗೌಡ ಹಾಗೂ ಜಿಲ್ಲೆಯ ಇತರ ಪರಾಜಿತ ಅಭ್ಯರ್ಥಿಗಳು ಇದಕ್ಕೆ ದನಿಗೂಡಿಸಿದ್ದರು. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಇದ್ದರೂ ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರ ಹಿತಾಸಕ್ತಿ ಕಾಪಾಡಲು ಮೈತ್ರಿ ಸಾಧ್ಯವಿಲ್ಲ ಎಂದು ವಾದಿಸಿದ್ದರು.

RELATED ARTICLES
- Advertisment -
Google search engine

Most Popular