ಬೀದರ್ : ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ವ್ಯಕ್ತಿ ಮೃತಪಟ್ಟಿರುವ ಘಟನೆ ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಮಂಗಲಗಿ ಗ್ರಾಮದ ಬಳಿ ನಡೆದಿದೆ. ಬಂಬಳಗಿ ಗ್ರಾಮದ ಸಂಜುಕುಮಾರ್ ಹೊಸಮನಿ(48) ಮೃತ ದುರ್ದೈವಿಯಾಗಿದ್ದು, ಪೊಲೀಸ್ ವರದಿಯ ಪ್ರಕಾರ ಸಂಜುಕುಮಾರ್ ಸ್ಥಳೀಯ ಹಾಸ್ಟೆಲ್‌ನಿಂದ ತನ್ನ ಮಗಳನ್ನು ಕರೆತರಲು ತೆರಳುತ್ತಿದ್ದಾಗ ಅವಘಡ ನಡೆದಿದೆ. ಮೃತ ವ್ಯಕ್ತಿ ಲಾರಿ ಕ್ಲೀನರ್ ಆಗಿ ಉದ್ಯೋಗ ಮಾಡಿಕೊಂಡಿದ್ದರು ಎಂಬುದು ಗೊತ್ತಾಗಿದೆ.

ಬೆಳಿಗ್ಗೆ ಸುಮಾರು 11 ಗಂಟೆ ಹೊತ್ತಿಗೆ ಮೋಟರ್ ಸೈಕಲ್‌ನಲ್ಲಿಪ್ರಯಾಣಿಸುತ್ತಿದ್ದ ವೇಳೆ ತಳಮಡಗಿ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿ ಬಳಿ ಮಾಂಜಾ ದಾರ ಸಂಜುಕುಮಾರ್ ಹೊಸಮನಿ ಕುತ್ತಿಗೆಗೆ ಸುತ್ತಿಕೊಂಡಿದೆ. ಈ ವೇಳೆ ಅರ್ಧ ಕುತ್ತಿಗೆ ಕಟ್ಟಾದ ಪರಿಣಾಮ ತೀವ್ರ ರಕ್ತಸ್ರಾವವಾಗಿದೆ. ಈ ವೇಳೆ ಸಂಜುಕುಮಾರ್ ಬೈಕ್ನಿಂದ ರಸ್ತೆಗೆ ಬಿದ್ದಿದ್ದು, ಸ್ಥಳದಲ್ಲೇ ಅಸುನೀಗಿದ್ದಾರೆ. ಆ ಮೂಲಕ ಸಂಕ್ರಾಂತಿ ಸಂಭ್ರಮದಲ್ಲಿದ್ದ ಮನೆಯಲ್ಲಿ ಶೋಕ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬೀದರ್ ಎಸ್ಪಿ ಪ್ರದೀಪ್ ಗುಂಟಿ, ಮಾಂಜಾ ದಾರ ಮಾರಾಟ ಹಾಗೂ ಬಳಕೆ ಎರಡು ಕೂಡಾ ಅಪರಾಧವಾಗಿದೆ. ಹೀಗಾಗಿ ಇಂತಹ ಸನ್ನಿವೇಶಗಳು ಕಂಡುಬಂದರೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳುವದಾಗಿ ಎಚ್ಚರಿಸಿದ್ದಾರೆ. ಸಂಕ್ರಾಂತಿ ಹಬ್ಬದ ನಿಮಿತ್ತ ಮಾಂಜಾ ದಾರಗಳ ಮಾರಾಟ ನಡೆಯುವ ಸಾಧ್ಯತೆ ಇರುವ ಕಾರಣ ಈಗಾಗಲೇ ನಾವು ಜಿಲ್ಲೆಯಲ್ಲಿ ಹಲವು ಅಂಗಡಿಗಳ ಮೇಲೆ ದಾಳಿ ಮಾಡಿದ್ದೇವೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದ್ದರೂ ಕೆಲವರು ಅವುಗಳ ಮಾರಾಟ ಮುಂದುವರಿಸಿದ್ದಾರೆ. ಅಂತಹ ಅಂಗಡಿಗಳ ಕುರಿತು ಪರಿಶೀಲನೆ ಮುಂದುವರಿದಿದೆ ಎಂದಿದ್ದಾರೆ.



