Friday, January 16, 2026
Google search engine

Homeರಾಜ್ಯಸುದ್ದಿಜಾಲಜ.18ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ಅನಾವರಣಗೊಳಿಸಲಿರುವ ಸಿಎಂ

ಜ.18ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ಅನಾವರಣಗೊಳಿಸಲಿರುವ ಸಿಎಂ


ತಿ.ನರಸೀಪುರ : ತಾಲೂಕಿನ ಕುಪ್ಯ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ಅನಾವರಣಗೊಳಿಸಿ, ಗ್ರಾಮ ಪಂಚಾಯಿತಿಯ ನೂತನ ಕಟ್ಟಡವನ್ನು ಉದ್ಘಾಟಿಸಲು ಹಾಗೂ ವಿವಿಧ ಸರ್ಕಾರಿ ಸವಲತ್ತುಗಳ ವಿತರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.18ರಂದು ಮಧ್ಯಾಹ್ನ 1 ಗಂಟೆಗೆ ಆಗಮಿಸಲಿದ್ದಾರೆ.

ಸುತ್ತೂರು ಜಾತ್ರೋತ್ಸವದಲ್ಲಿ ಭಾಗಿಯಾದ ಬಳಿಕ ರಸ್ತೆಯ ಮಾರ್ಗವಾಗಿ ವರುಣ ವಿಧಾನಸಭಾ ಕ್ಷೇತ್ರದ ಕುಪ್ಯ ಗ್ರಾಮಕ್ಕೆ ಮಧ್ಯಾಹ್ನ ಆಗಮಿಸುವ ಸಿಎಂ ಸಿದ್ದರಾಮಯ್ಯ ಅವರು ಮೊದಲು ಬಾಬು ಜಗಜೀವನ್ ರಾಂ ಅವರ ಪುತ್ಥಳಿಯನ್ನು ಅನಾವರಣಗೊಳಿಸುವರು.

ನಂತರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಲೋಕಾರ್ಪಣೆಗೊಳಿಸಿ, ಗ್ರಾಮ ಪಂಚಾಯಿತಿಯ ನೂತನ ಕಟ್ಟಡವನ್ನು ಉದ್ಘಾಟಿಸುವರು. ಬಳಿಕ ಮೇಗಳಾಪುರ ರಸ್ತೆಯಲ್ಲಿನ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ತುಂಬಲ ಗ್ರಾ.ಪಂನಿಂದ ಬೇರ್ಪಟ್ಟ ಕುಪ್ಯ ಗ್ರಾ.ಪಂ ಗೆ ರಾಜ್ಯ ಸರ್ಕಾರದ 20 ಲಕ್ಷ, ಹದಿನೈದನೇ ಹಣಕಾಸು 13 ಲಕ್ಷ, ಶಾಸಕರ ಪ್ರದೇಶಾಭಿವೃದ್ಧಿ ಅನುದಾನ 10 ಲಕ್ಷ ಕ್ರೋಢೀಕರಿಸಿ ಒಟ್ಟು 43 ಲಕ್ಷ ರೂಗಳ ವೆಚ್ಚದಲ್ಲಿ ನೂತನ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ನೇತೃತ್ವದಲ್ಲಿ ಸುಮಾರು 9 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಎಂಎಲ್‌ ಸಿ ಡಾ.ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಸಮುದಾಯದ ಹಲವು ಗಣ್ಯರು ನೆರವು ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಸಿಎಂ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಇದೇ ವೇಳೆ ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಸರ್ಕಾರಿ ಸವಲತ್ತು ವಿತರಣೆಯನ್ನು ಹಮ್ಮಿಕೊಳ್ಳಲಾಗಿದೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವರಾದ ಡಾ. ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಬೈರತಿ ಸುರೇಶ್, ಸಂಸದ ಸುನೀಲ್ ಬೋಸ್, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹಾಗೂ ಎರಡೂ ಜಿಲ್ಲೆಗಳ ಶಾಸಕರು ಮತ್ತು ಜನಪ್ರತಿನಿಧಿಗಳು ಭಾಗವಹಿಸುವರು.

ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ಕುಪ್ಯ ಗ್ರಾಮದಲ್ಲಿ ಸಿದ್ಧತೆಗಳು ಬಿರುಸಿನಿಂದ ನಡೆಯುತ್ತಿವೆ. ಡಾಂಬರೀಕರಣಗೊಂಡಿರುವ ರಸ್ತೆಯ ಎರಡು ಬದಿಯ ಮೇಲಿನ ಧೂಳನ್ನು ತೆಗೆದು ಜೀಬ್ರಾ ಕ್ರಾಸಿಂಗ್ ಬಳಿಯಲಾಗುತ್ತಿದೆ. ಸಂಗೊಳ್ಳಿ ರಾಯಣ್ಣ ಹಾಗೂ ಬಾಬೂಜಿ ಪುತ್ಥಳಿಗಳನ್ನು ಅಲಂಕರಿಸಲಾಗುತ್ತಿದೆ. ಗ್ರಾಮ ಪಂಚಾಯಿತಿಯ ನೂತನ ಕಟ್ಟಡವನ್ನು ಶೃಂಗರಿಸಲಾಗಿದೆ.

ಕುಪ್ಯ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪುತ್ಥಳಿ ಅನಾವರಣಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಸಿಎಂ ಸಿದ್ದರಾಮಯ್ಯ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹಾಗೂ ಎಮ್ ಎಲ್ ಸಿ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಶ್ರೀ ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆಯಿಂದ ವಿಶೇಷ ನೆನಪಿನ ಕಾಣಿಕೆಯನ್ನು ಕೊಟ್ಟು ಸನ್ಮಾನಿಸಲಾಗುವುದು.

ಡಿ.ಶಂಕರ್, ಅಧ್ಯಕ್ಷ, ಶ್ರೀ ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ, ಕುಪ್ಯ

RELATED ARTICLES
- Advertisment -
Google search engine

Most Popular