ನವಿ ಮುಂಬಯಿ : ಶುಕ್ರವಾರ(ನಿನ್ನೆ) ನಡೆದ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ 32 ರನ್‌ಗಳಿಂದ ಗೆದ್ದು ತನ್ನ ಅಜೇಯ ಗೆಲುವನ್ನು ಪಡೆದಿದ್ದು, ಈ ಪಂದ್ಯದಲ್ಲಿ ಕನ್ನಡತಿ ಶ್ರೇಯಾಂಕ ಪಾಟೀಲ್ 5 ವಿಕೆಟ್ ಪಡೆದು ದಾಖಲೆ ಬರೆದಿದ್ದಾರೆ.
ಇನ್ನೂ ಈ ಪಂದ್ಯದಲ್ಲಿ ಶ್ರೇಯಾಂಕ ಪಾಟೀಲ್ 3.5 ಓವರ್ ಬೌಲಿಂಗ್ ಮಾಡಿ 23 ರನ್ ಬಿಟ್ಟುಕೊಟ್ಟು ಐದು ವಿಕೆಟ್‌ಗಳನ್ನು ಪಡೆದರು. ಈ ಮೂಲಕ ಡಬ್ಲ್ಯೂಪಿಎಲ್ ಇತಿಹಾಸದಲ್ಲಿ ಐದು ವಿಕೆಟ್‌ಗಳನ್ನು ಪಡೆದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ತಮ್ಮ ಅದ್ಭುತ ಪ್ರದರ್ಶನದಿಂದ ಇತಿಹಾಸ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ.
WPL ನಲ್ಲಿ ಐದು ವಿಕೆಟ್ ಸಾಧನೆ ಪಡೆದವರು :
- 6/15 – ಎಲ್ಲಿಸ್ ಪೆರ್ರಿ, 2024
- 5/15 – ಮರಿಜಾನ್ನೆ ಕಪ್ಪ್, 2023
- 5/22 – ಆಶಾ ಸೋಭಾನ, 2024
- 5/23 – ಶ್ರೇಯಾಂಕ ಪಾಟೀಲ್, 2026
- 5/29 – ತಾರಾ ನಾರ್ರಿಸ್, ಬ್ರಾಬೋರ್ನ್, 2023
- 5/33 – ನಂದನಿ ಶರ್ಮಾ, 2026
- 5/36 – ಕಿಮ್ ಗಾರ್ತ್, 2023
- 5/38 – ಅಮೆಲಿಯಾ ಕೆರ್, 2025
ಇನ್ನೂ ಈ ಪಂದ್ಯದಲ್ಲಿ, ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಬಂದ ಆರ್‌ಸಿಬಿ ಪವರ್ಪ್ಲೇನಲ್ಲೇ ಆರಂಭಿಕ 4 ವಿಕೆಟ್ ಕಳೆದುಕೊಂಡು ಭಾರಿ ಸಂಕಷ್ಟಕ್ಕೆ ಸಿಲುಕಿತ್ತು. ಒಂದು ಹಂತದಲ್ಲಿ ತಂಡ ಅಲ್ಪಮೊತ್ತಕ್ಕೆ ಕುಸಿಯುವ ಆತಂಕ ಎದುರಾಗಿತ್ತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಮಿಂಚಿದ ರಾಧ ಯಾದವ್ ಮತ್ತು ರಿಚಾ ಘೋಷ್ 105 ರನ್‌ಗಳ ಜೊತೆಯಾಟವಾಡುವ ಮೂಲಕ ಪಂದ್ಯ ಗತಿಯನ್ನೇ ಬದಲಿಸಿದರು. ಇವರ ಬ್ಯಾಟಿಂಗ್ ಬಲದಿಂದಾಗಿ ಆರ್‌ಸಿಬಿ 7 ವಿಕೆಟ್ ನಷ್ಟಕ್ಕೆ 182 ರನ್ಗಳನ್ನು ಕಲೆಹಾಕಿತು.
ಗುಜರಾತ್ ಪರ ಸೋಫಿ ಡಿವೈನ್ 3 ವಿಕೆಟ್ ಪಡೆದು ಮಿಂಚಿದರೇ, ಕಶ್ವೇ ಗೌತಮ್ 2 ವಿಕೆಟ್ ಉರುಳಿಸಿದರು. ಜವಾಬಿತ್ತ ಗುಜರಾತ್ ಜೈಂಟ್ಸ್ ಕೂಡ ಆರ್‌ಸಿಬಿಯಂತೆ ಆರಂಭಿಕ ಆಘಾತ ಎದುರಿಸಿದರು. ಅಲ್ಲದೆ 150 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ಭಾರ್ತಿ ಫುಲ್ಮಾಲಿ 39 ರನ್‌ಗಳೊಂದಿಗೆ ಗರಿಷ್ಠ ಸ್ಕೋರರ್ ಎನಿಸಿಕೊಂಡರೇ. ಬೆತ್ ಮೂನಿ 27 ರನ್, ತನುಜಾ ಕನ್ವರ್ 21 ರನ್‌ಗಳ ಕೊಡುಗೆ ನೀಡಿದ್ದು, ಉಳಿದ ಬ್ಯಾಟರ್ಗಳ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದರು.



