ಬಳ್ಳಾರಿ ನಗರದಲ್ಲಿ ಬ್ಯಾನರ್ ವಿವಾದದಿಂದ ಉಂಟಾದ ಗಲಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ರೆಡ್ಡಿ ಮೃತಪಟ್ಟಿದ್ದರು. ಈ ವಿಚಾರ ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿತ್ತು. ಅಲ್ಲದೆ ಕಾಂಗ್ರೆಸ್ ಶಾಸಕ ನಾರಾ ಭರತ್ರೆಡ್ಡಿ ವಿರುದ್ಧ ಬಿಜೆಪಿ ನಾಯಕರು ಸಾಲು ಸಾಲು ಆರೋಪ ಮಾಡಿದ್ದರು. ಇಂದು ಎಪಿಎಂಸಿ ಮೈದಾನದಲ್ಲಿ ಬಿಜೆಪಿ ಬೃಹತ್ ಪ್ರತಿಭಟನಾ ಸಮಾವೇಶ ಕೂಡ ಹಮ್ಮಿಕೊಂಡಿದೆ. ಇದರ ಜೊತೆಗೆ ಬಿಜೆಪಿ ನಾಯಕರು ಮೃತನ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದಾರೆ.
ಇದೀಗ ಮೃತ ರಾಜಶೇಖರ್ ನಿವಾಸಕ್ಕೆ ಬಿಜೆಪಿ ನಾಯಕರು ಭೇಟಿ ನೀಡಿ ಸಾಂತ್ವನ ಹೇಳಿ ಪರಿಹಾರ ನೀಡಿದ್ದು, ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ನಾಯಕರು ಹುಸೇನ್ ನಗರದಲ್ಲಿರುವ ರಾಜಶೇಖರ್ ನಿವಾಸಕ್ಕೆ ತೆರಳಿ ಕುಟುಂಬ ಸದಸ್ಯರಿಗೆ ಸಾಂತ್ವನ ತಿಳಿಸಿದರು. ಈ ವೇಳೆ ಶಾಸಕ ಗಾಲಿ ಜನಾರ್ಧನ ರೆಡ್ಡಿ, ಮಾಜಿ ಸಚಿವ ಬಿ.ಶ್ರೀರಾಮುಲು ಮತ್ತು ಜನಾರ್ಧನ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮಿ ಸಹ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಅರುಣಾ ಲಕ್ಷ್ಮಿ ಮೃತ ಕುಟುಂಬಕ್ಕೆ 10 ಲಕ್ಷ ರೂಪಾಯಿಗಳ ಚೆಕ್ ವಿತರಿಸಿದ್ದಾರೆ. ಇದೇ ವೇಳೆ ಬಳ್ಳಾರಿ ನಗರದ ಎಪಿಎಂಸಿ ಮೈದಾನದಲ್ಲಿ ಬಿಜೆಪಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಬ್ಯಾನರ್ ಗಲಾಟೆಯನ್ನು ಖಂಡಿಸಿ ನಡೆದ ಈ ಸಮಾವೇಶಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಂಸದರು, ಬಳ್ಳಾರಿ, ಕೊಪ್ಪಳ, ರಾಯಚೂರು ಭಾಗದ ಮಾಜಿ ಶಾಸಕರು ಮತ್ತು ಶಾಸಕರು ಭಾಗವಹಿಸಿದ್ದರು.



