ಗುಂಡ್ಲುಪೇಟೆ: ವಿವಿಧ ಪ್ರಕರಣದ ಅಡಿಯಲ್ಲಿ ವಶಕ್ಕೆ ಪಡೆದಿದ್ದ ಸುಮಾರು 208 ಲೀಟರ್ ಅಕ್ರಮ ಮದ್ಯ ಹಾಗೂ 13 ಲೀಟರ್ ಬೀಯರ್‍ಗಳನ್ನು ಅಬಕಾರಿ ನಿರೀಕ್ಷಕ ಅಧಿಕಾರಿಗಳು ಪಟ್ಟಣದ ಅಬಕಾರಿ ಕಚೇರಿ ಆವರಣದಲ್ಲಿ ಗುರುವಾರ ನಾಶಪಡಿಸಿದ್ದಾರೆ.
ತಾಲೂಕಿನ ವಿವಿಧ ಕಡೆ ಅಕ್ರಮ ಮದ್ಯ ಮಾರಾಟ ಮತ್ತು ಸಾಗಾಟ ಮಾಡುತ್ತಿದ್ದ 286 ಪ್ರಕರಣಗಳಲ್ಲಿ ಅಂದಾಜು 87,000 ರೂ. ಮೌಲ್ಯದ ಸುಮಾರು 208 ಲೀಟರ್ ಅಕ್ರಮ ಮದ್ಯ ಹಾಗೂ 13 ಲೀಟರ್ ಬೀಯರ್‍ಗಳನ್ನು ನಾಶ ಪಡಿಸಲಾಗಿದೆ.
ಈ ಸಂದರ್ಭದಲ್ಲಿ ಚಾಮರಾಜನಗರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಎಂ.ಡಿ.ಮೋಹನ್ ಕುಮಾರ್ ಮಾತನಾಡಿ, ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ, ಸಾಗಣೆ ಕಂಡು ಬಂದಲ್ಲಿ ಅಬಕಾರಿ ಇಲಾಖೆಗೆ ದೂರು ನೀಡಿ ಅಥವಾ ಕರೆ ಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಿ, ಸರ್ಕಾರದ ನಿಯಮ ಮೀರಿ ಅಕ್ರಮವಾಗಿ ಮಧ್ಯ ಮಾರಾಟ ಮಾಡಿದರೆ ಅಂತವರನ್ನು ಗುರುತಿಸಿ ದಂಡ ವಿಧಿಸುವ ಜೊತೆಗೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಶಿರಸ್ತೇದಾರ್ ಮಹೇಶ್, ಗುಂಡ್ಲುಪೇಟೆ ವಲಯ ಅಬಕಾರಿ ನಿರೀಕ್ಷಕ ತನ್ವೀರ್, ಚಾಮರಾಜನಗರ ಉಪವಿಭಾಗದ ಅಬಕಾರಿ ನಿರೀಕ್ಷಕ ಎಂ.ಬಿ.ಉಮಾಶಂಕರ್, ಚಾಮರಾಜನಗರ ಉಪವಿಭಾಗದ ಅಬಕಾರಿ ಉಪ ನಿರೀಕ್ಷಕಿ ನಂದಿನಿ, ಸಿದ್ದರಾಜು ಇತರರು ಹಾಜರಿದ್ದರು.