ಬೆಂಗಳೂರು: ಡಿಕೆಶಿ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟು ಡೆಲ್ಲಿಯಲ್ಲಿ ಸರ್ಕಸ್ ಮಾಡ್ತಿದ್ದಾರೆ. ಇತ್ತ ಸಿದ್ದರಾಮಯ್ಯ ಬೆಂಗಳೂರಲ್ಲೇ ಕುಳಿತು ಚದುರಂಗದಾಟ ಆಡಲು ಶುರು ಮಾಡಿದ್ದಾರೆ. ಪವರ್ ಶೇರ್ ಚೆಕ್‌ಮೇಟ್ ಗೇಮ್ ಶುರುವಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ತೀರ್ಪು ಮಾತ್ರ ಸದ್ಯಕ್ಕೆ ಹೊರಬೀಳುವ ಲಕ್ಷಣ ಕಾಣಿಸ್ತಿಲ್ಲ. ಹಾಗಾದ್ರೆ ಇನ್ನೆಷ್ಟು ದಿನ ಕುರ್ಚಿ ಆಟ..? ಹೈಕಮಾಂಡ್‌ಗೆ ಯಾರ ಧರ್ಮಸಂಕಟ..?
ಡಿಕೆಶಿ ಡೆಲ್ಲಿ ಆಟ. ಸಿದ್ದರಾಮಯ್ಯ ಬೆಂಗಳೂರು ಆಟ. ಆದರೆ, ಹೈಕಮಾಂಡ್ ಮುಂದೆ ಗೆಲ್ಲೋದು ಯಾರ ಚದುರಂಗದಾಟ..? ಇದು ಕಾಂಗ್ರೆಸ್ ಒಳಗೆ ನಡೆಯುತ್ತಿರುವ ಬಿಸಿ ಬಿಸಿ ಚರ್ಚೆ. ಬೆಂಗಳೂರಲ್ಲೇ ಕುಳಿತು ಹೈಕಮಾಂಡ್‌ಗೆ ಸಿದ್ದರಾಮಯ್ಯ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ. ಡಿಕೆಶಿ, ಖರ್ಗೆಗೂ ಗೊತ್ತಿಲ್ಲದಂತೆ ಆಪ್ತನ ಮೂಲಕ ಮೆಸೇಜ್ ಪಾಸ್ ಮಾಡುವಲ್ಲಿ ಸಕ್ಸಸ್ ಆಗಿದ್ದಾರೆ ಎನ್ನಲಾಗಿದೆ. ಹಾಗಾಗಿಯೇ ನಿನ್ನೆ ಜಾರ್ಜ್, ರಾಹುಲ್ ಭೇಟಿ ಬಗ್ಗೆ ನಾನಾ ಲೆಕ್ಕಾಚಾರಗಳು ಗರಿಗೆದರಿವೆ.
ಹೈಕಮಾಂಡ್ ಜೊತೆ ಡಿಕೆಶಿ ಏನೇ ಮಾತನಾಡಿದ್ರೂ ಮಾತಾಡಲಿ.. ನನ್ನ ಕ್ಲೈಮ್ ಆ್ಯಂಡ್ ಗೇಮ್ ಇಷ್ಟೇ ಎಂಬ ಸುಳಿವನ್ನ ಸಿಎಂ ಕೊಟ್ಟಂತೆ ಕಾಣುತ್ತಿದೆ. ಸದ್ಯಕ್ಕೆ ಬಜೆಟ್ ಮಂಡನೆ ಮಾಡಲು ಅವಕಾಶ ಕೊಡಬೇಕು. ಪವರ್ ಶೇರ್ ವಿಚಾರ ಬಜೆಟ್ ಮಂಡನೆ ಬಳಿಕ ನಡೆಯಲಿ ಎಂಬ ತಂತ್ರ ಸಿದ್ದರಾಮಯ್ಯ ಅವರದ್ದು. ಹಾಗಾಗಿ, ಸದ್ಯಕ್ಕೆ ಡಿಕೆಶಿಗೆ ಯಾವುದೇ ಭರವಸೆ ಕೊಡದಂತೆ ಸಿಎಂ ಯತ್ನಿಸಿದ್ದು, ಡಿಕೆಶಿ ಡೆಲ್ಲಿಯಲ್ಲಿ ಇರುವಾಗಲೇ ಆಪ್ತ ಜಾರ್ಜ್ ರಾಹುಲ್ ಭೇಟಿ ಆಗಿ ಸಿದ್ದರಾಮಯ್ಯ ಮನದಾಳದ ಮೆಸೇಜ್ ತಲುಪಿಸಿದ್ದಾರಂತೆ. ಇನ್ನು 2028ರ ತನಕವೂ ಸಿದ್ದರಾಮಯ್ಯ ಸಿಎಂ ಅಂತಾ ಆಪ್ತ ಸಚಿವ ಮಹದೇವಪ್ಪ ಪುನರುಚ್ಚರಿಸಿದ್ದಾರೆ.
ಇನ್ನೊಂದೆಡೆ ಡೆಲ್ಲಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಕಸರತ್ತು ನಡೆಸುತ್ತಿದ್ದಾರೆ. ದೆಹಲಿಯಲ್ಲೇ ವಾಸ್ತವ್ಯ ಹೂಡಿ ಪಟ್ಟು ಹಾಕ್ತಿರುವ ಡಿಕೆಶಿ ಹೈಕಮಾಂಡ್ ಜೊತೆ ಪ್ರತ್ಯೇಕ ಮಾತುಕತೆಗೆ ಯತ್ನಿಸಿದ್ದಾರೆ. ನಿನ್ನೆ ಅಸ್ಸಾಂ ಚುನಾವಣಾ ವೀಕ್ಷಕರ ಸಭೆಯಲ್ಲಿ ರಾಹುಲ್ ಮುಖಾಮುಖಿ ಆಗಿರುವ ಡಿಕೆಶಿ ಪವರ್ ಶೇರ್ ಸಂಬಂಧ ಯಾವುದೇ ಮಾತುಕತೆ ನಡೆಸಿಲ್ಲ ಎನ್ನಲಾಗಿದೆ. ಈ ನಡುವೆ ಸೋನಿಯಾ ಗಾಂಧಿ ಭೇಟಿಗೆ ಡಿಕೆಶಿ ಪ್ರಯತ್ನ ನಡೆಸುತ್ತಿದ್ದಾರೆ. ಅನಾರೋಗ್ಯದ ಕಾರಣದಿಂದ ಸೋನಿಯಾ ಭೇಟಿ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಭೀಮಣ್ಣ ಖಂಡ್ರೆ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ಸಲುವಾಗಿ ದಿಢೀರ್ ದೆಹಲಿಯಿಂದ ವಾಪಸ್ ಆಗಿರುವ ಡಿಕೆಶಿ, ಇವತ್ತು ರಾತ್ರಿ ಮತ್ತೆ ದೆಹಲಿಗೆ ತೆರಳಿ ವಾಸ್ತವ್ಯ ಹೂಡಲಿದ್ದಾರೆ. ಇನ್ನು ಸಿದ್ದರಾಮಯ್ಯ ಆಪ್ತ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು, ನಾಯಕತ್ವ ಗೊಂದಲ ಬಗ್ಗೆ ಹೈಕಮಾಂಡ್ ಗಮನಕ್ಕೆ ಇದೆ. ಅವರೇ ಎಲ್ಲ ಬಗೆ ಹರಿಸುತ್ತಾರೆ. ನಾವು ಪದೇ ಪದೇ ಮನವಿ ಮಾಡುವ ಅವಶ್ಯಕತೆ ಇಲ್ಲ. ಡಿ.ಕೆ.ಶಿವಕುಮಾರ್ ದೆಹಲಿ ಭೇಟಿ ಬಗ್ಗೆ ಮಾಹಿತಿ ಇಲ್ಲ.
ಇದೆಲ್ಲ ಗದ್ದಲದ ನಡುವೆ ನಿನ್ನೆ ಮಾಜಿ ಸಚಿವ ರಾಜಣ್ಣ ಅವರ ತುಮಕೂರ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ತೆರಳಿರೋದು ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ನಾಟಿಕೋಳಿ ಊಟ ಮಾಡಿ ರಾಜಣ್ಣ ಮತ್ತೆ ಸಚಿವ ಸಂಪುಟಕ್ಕೆ ಸೇರುವ ಸುಳಿವು ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪರಮೇಶ್ವರ್, ಕೆ.ಎನ್.ರಾಜಣ್ಣ ಮನೆಯಲ್ಲಿ ಮಾಂಸಾಹಾರಿ ಊಟ ಇತ್ತು. ಊಟ ಬಿಟ್ಟು ಬೇರೇನೂ ರಾಜಕೀಯ ಚರ್ಚೆ ಆಗಲಿಲ್ಲ. ರಾಜಣ್ಣಗೆ ನಾನು ಯಾವತ್ತೂ ಸಿಹಿ ಸುದ್ದಿನೇ ಕೊಡೋದು ಅಂತ ಸಿಎಂ ಹೇಳಿದ್ದಾರೆ ಅಂತೇಳಿದ್ರು.
ಒಟ್ನಲ್ಲಿ ಇಷ್ಟೆಲ್ಲ ಬೆಳವಣಿಗೆಗಳನ್ನ ನೋಡ್ತಿದ್ರೆ ಪವರ್ ಶೇರ್ ಅಷ್ಟು ಸ್ಮೂತ್ ಆಗಲ್ಲವಾ..? ರಫ್ ಆಗುತ್ತಾ..? ಎಂಬ ಕುತೂಹಲ ಒಂದ್ಕಡೆ ಆಗಿದ್ರೆ, ಈ ಸಲದ ಡೆಲ್ಲಿಯಾತ್ರೆಯಲ್ಲಿ ಡಿಕೆಶಿಗೆ ಸಿಹಿನೋ..? ಕಹಿನೋ..? ಎಂಬ ಕುತೂಹಲ ಇನ್ನೊಂದ್ಕಡೆ ಇದ್ದು, ಪವರ್ ಶೇರ್ ಕೆಂಡ ಯಾರನ್ನ ಸುಡುತ್ತೋ ಕಾದುನೋಡಬೇಕಿದೆ.



