ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಆಗಿ ಗಿಲ್ಲಿ ನಟರಾಜ್ ಹೊರಹೊಮ್ಮಿದ್ದು, ಅವರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಹೆಚ್‌ಡಿಕೆ, ಮಂಡ್ಯ ಲೋಕಸಭೆ ಕ್ಷೇತ್ರದ ಮಳವಳ್ಳಿಯ ಅಪ್ಪಟ ಗ್ರಾಮೀಣ ಪ್ರತಿಭೆ ಗಿಲ್ಲಿ ನಟರಾಜ್ (ಶ್ರೀ ನಟರಾಜ್) ಅವರು ಅಭೂತಪೂರ್ವ ವಿಜಯ ಸಾಧಿಸಿದ್ದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಬಣ್ಣಿಸಿದ್ದಾರೆ. ಹಳ್ಳಿಯ ರೈತನ ಮಗನಾಗಿ ಹುಟ್ಟಿ ಜನರ ಮನ ಗೆದ್ದಿರುವ ಅವರಿಗೆ ಇನ್ನೂ ಹೆಚ್ಚಿನ ಕೀರ್ತಿ ಹಾಗೂ ಹೆಸರು ದೊರಕಲಿ ಎಂದು ಶುಭಹಾರೈಸಿದ್ದಾರೆ.
ಅಲ್ಲದೆ, ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ ಕುಮಾರಿ ರಕ್ಷಿತಾ ಶೆಟ್ಟಿ ಹಾಗೂ ಎರಡನೇ ರನ್ನರ್ ಅಪ್ ಅಶ್ವಿನಿ ಗೌಡ ಅವರಿಗೂ ಅಭಿನಂದನೆ ಸಲ್ಲಿಸಿದ್ದಾರೆ. ವಿನ್ನರ್ ಆಗಿರುವ ಗಿಲ್ಲಿ ನಟರಾಜ್ ಅವರಿಗೆ 50 ಲಕ್ಷ ರೂಪಾಯಿ ನಗದು ಬಹುಮಾನ, ಕಾರು ಹಾಗೂ ಸುದೀಪ್ ಅವರ ಕಡೆಯಿಂದ 10 ಲಕ್ಷ ರೂಪಾಯಿ ಬಹುಮಾನ ಲಭಿಸಿದೆ. ಗಿಲ್ಲಿ ವಿನ್ ಆಗುತ್ತಿದ್ದಂತೆ ತವರಾದ ಮಳವಳ್ಳಿಯಲ್ಲಿ ಸಂಭ್ರಮಾಚರಣೆ ಜೋರಾಗಿದ್ದು, ಅಭಿಮಾನಿಗಳು ಅದ್ಧೂರಿ ಸ್ವಾಗತಕ್ಕೆ ಸಜ್ಜಾಗಿದ್ದಾರೆ. ಎಲ್ಲೆಡೆ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ.



