ಮೈಸೂರು, ಆ. ೩: ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಶಾಲಾ ಕಟ್ಟಡ ಹಾಗೂ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಸರ್ಕಾರ ನನಗೆ ನೀಡುವ ವಿಧಾನ ಪರಿಷತ್ ಸದಸ್ಯರ ಅನುದಾನವನ್ನು ಬಳಸಿಕೊಳ್ಳಿರಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಕರೆ ನೀಡಿದರು.
ಮೈಸೂರಿನ ಅವರ ನಿವಾಸದಲ್ಲಿ ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನ ಗುಂಬಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷೆ ಮೀನಾ ಗೋವಿಂದರಾಜು, ಉಪಾಧ್ಯಕ್ಷ ಶ್ರೀನಿವಾಸ್‌ರವರನ್ನು ಅಭಿನಂದಿಸಿ ಮಾತನಾಡಿದ ಅವರು ಮನುಷ್ಯನಿಗೆ ಶುದ್ಧ ಕುಡಿಯುವ ನೀರಿನ ಅವಶ್ಯಕತೆ ಇದ್ದು, ಗ್ರಾಮೀಣ ಭಾಗದ ಜನರ ಆರೋಗ್ಯದ ದೃಷ್ಟಿಯಿಂದ ಜನಸಂಖ್ಯೆಗೆ ಅನುಗುಣವಾಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿಕೊಳ್ಳಿರಿ. ವಿಧವೆಯರಿಗೆ, ಅವರ ಮಕ್ಕಳಿಗೆ ಹಾಗೂ ವೃದ್ಧರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ದೊರಕಿಸಿ ಕೊಡಲು ಪ್ರಯತ್ನಿಸಿ. ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗುವಂತೆ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಪಡಿಸಿ. ಸರ್ಕಾರದಿಂದ ಗ್ರಾಮೀಣ ಪ್ರದೇಶಕ್ಕೆ ರೈತರಿಗೆ ಸಿಗುವ ಸಾಲಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸಿ. ಎಷ್ಟೇ ಹಣವಿದ್ದರೂ ಸಹ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರಾಗಲು ಆಗುವುದಿಲ್ಲ. ನಿಮಗೆ ಸಂವಿಧಾನದಡಿಯಲ್ಲಿ ಅವಕಾಶ ಸಿಕ್ಕಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ನಟರಾಜ್ ಜೆ., ಭಾಗ್ಯ ವೆಂಕಟರಾಜು, ಕರಷ್ಣಕುಮಾರ್, ರವಿ, ಮಾದೇಶ್ ಕೆ., ರಾಜೇಂದ್ರ, ರಂಗರಾಮು, ವಿ. ಮಾದೇಶ, ಮುಖಂಡರಾದ ಭರತ್ ಮಂಜೇಗೌಡ, ಶ್ರೀರಾಂಪುರ ರಮೇಶ್, ಸುರೇಂದ್ರ ಕುಮಾರ್ ಮತ್ತಿತರರು ಹಾಜರಿದ್ದರು.